ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ನಕಲಿ ಅಥವಾ ಮೃತ ಮತದಾರರ ಹೆಸರುಗಳನ್ನು ಸೇರಿಸುವುದನ್ನು ತಡೆಯಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಪರಿಶೀಲನಾ ವ್ಯವಸ್ಥೆಯನ್ನು ಪರಿಚಯಿಸಲು ಚುನಾವಣಾ ಆಯೋಗವು ಸಜ್ಜಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ಮಂಗಳವಾರ ತಿಳಿಸಿದರು.
ಮತದಾರರ ಡೇಟಾ ಬೇಸ್‌ನಲ್ಲಿರುವ ಛಾಯಾಚಿತ್ರಗಳಾದ್ಯಂತ ಮುಖ ಹೋಲಿಕೆಗಳನ್ನು ವಿಶ್ಲೇಷಿಸುವ ಮೂಲಕ AI ವ್ಯವಸ್ಥೆಯು ಬೇರೆ ಬೇರೆ ಕಡೆಗಳಲ್ಲಿ ಮತದಾರರ ಪಟ್ಟಿಗಳಲ್ಲಿ ನೋಂದಣಿಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸಲು ನೆರವಾಗಲಿದೆ.
'ಮತದಾರರ,ವಿಶೇಷವಾಗಿ ವಲಸೆ ಕಾರ್ಮಿಕರ ಛಾಯಾಚಿತ್ರಗಳ ದುರುಪಯೋಗ ಕುರಿತು ದೂರುಗಳು ಹೆಚ್ಚುತ್ತಿರುವುದರಿಂದ ನಾವು AI ನೆರವನ್ನು ಪಡೆದುಕೊಳ್ಳುತ್ತಿದ್ದೇವೆ ' ಎಂದು ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದರು.
ಆದರೂ ಪರಿಶೀಲನೆ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒಗಳು) ಕೇಂದ್ರ ಪಾತ್ರವು ಮುಂದುವರಿಯುತ್ತದೆ ಎಂದರು.
AI ಪರಿಶೀಲನೆಗೆ ನೆರವಾಗಲಿದೆ. ಆದರೆ ತಂತ್ರಜ್ಞಾನದ ಬಳಕೆಯ ಹೊರತಾಗಿಯೂ ಬಿಎಲ್‌ಒಗಳ ಪಾತ್ರ ನಿರ್ಣಾಯಕವಾಗಿರುತ್ತದೆ. ಅವರು ಮನೆಮನೆಗೆ ಭೇಟಿ ನೀಡಿ ಮತದಾರರ ಛಾಯಾಚಿತ್ರಗಳನ್ನು ನೇರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಬೂತ್ ಮಟ್ಟದ ಏಜೆಂಟರು ಪೂರ್ಣಗೊಳಿಸಿದ ಫಾರ್ಮ್ ಗಳನ್ನು ಸಲ್ಲಿಸಿದ್ದರೂ ಸಹಿ ಪರಿಶೀಲನೆಗಾಗಿ ಬಿಎಲ್‌ಒಗಳು ಖುದ್ದಾಗಿ ಭೇಟಿ ನೀಡುವುದು ಅಗತ್ಯವಾಗಿದೆ. ತಮ್ಮ ಉಪಸ್ಥಿತಿಯಲ್ಲಿ ಫಾರ್ಮ್‌ಗಳನ್ನು ಭರ್ತಿ ಮಾಡಲಾಗಿದೆ ಎಂದು ದೃಢೀಕರಿಸುವ ಲಿಖಿತ ಹೇಳಿಕೆಗಳನ್ನೂ ಮತದಾರರಿಂದ ಬಿಎಲ್‌ಒಗಳು ಪಡೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿ ವಿವರಿಸಿದರು.
ಎಣಿಕೆ ಮತ್ತು ಫಾರ್ಮಗಳ ಸಲ್ಲಿಕೆಯ ಬಳಿಕ ಯಾವುದೇ ನಕಲಿ ಅಥವಾ ಮೃತ ಮತದಾರರು ಪತ್ತೆಯಾದರೆ ಅದಕ್ಕೆ ಸಂಬಂಧಿಸಿದ ಮತಗಟ್ಟೆಯ ಬಿಎಲ್‌ಒ ಹೊಣೆಗಾರರಾಗುತ್ತಾರೆ ಎಂದೂ ಅವರು ಹೇಳಿದರು.




