HEALTH TIPS

ಬೃಹತ್ ಬ್ಯಾಂಕಿಂಗ್,ಕಾರ್ಪೊರೇಟ್ ವಂಚನೆ ಆರೋಪ; ಕೇಂದ್ರ, ಸಿಬಿಐ, ಈಡಿ, ಅನಿಲ್ ಅಂಬಾನಿಗೆ ಸುಪ್ರೀಂ ನೋಟಿಸ್

ನವದೆಹಲಿ: ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್),ಅದರ ಅಂಗಸಂಸ್ಥೆಗಳು ಮತ್ತು ಅವುಗಳ ಪ್ರವರ್ತಕರು ಭಾಗಿಯಾಗಿರುವ ಬೃಹತ್ ಬ್ಯಾಂಕಿಂಗ್ ಮತ್ತು ಕಾರ್ಪೊರೇಟ್ ವಂಚನೆಯ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ(ಪಿಐಎಲ್) ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಕೇಂದ್ರ ,ಸಿಬಿಐ, ಈಡಿ, ಅನಿಲ್ ಅಂಬಾನಿ ಮತ್ತು ಇತರರಿಗೆ ನೋಟಿಸ್‌ ಗಳನ್ನು ಹೊರಡಿಸಿದೆ.

ಮೂರು ವಾರಗಳಲ್ಲಿ ಉತ್ತರಗಳನ್ನು ಸಲ್ಲಿಸುವಂತೆ ಅದು ಸೂಚಿಸಿದೆ.

ಕೇಂದ್ರ ಸರಕಾರದ ಮಾಜಿ ಕಾರ್ಯದರ್ಶಿ ಇ.ಎ.ಎಸ್.ಶರ್ಮಾ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾ.ಕೆ.ವಿನೋದ್ ಚಂದ್ರನ್ ಅವರ ಪೀಠವು ಮುಂದಿನ ವಿಚಾರಣೆಯನ್ನು ಮೂರು ವಾರಗಳ ಬಳಿಕ ನಿಗದಿಗೊಳಿಸಿತು.

ಬೃಹತ್ ಬ್ಯಾಂಕಿಂಗ್ ವಂಚನೆಯಲ್ಲಿ ಬ್ಯಾಂಕುಗಳು ಮತ್ತು ಅವುಗಳ ಅಧಿಕಾರಿಗಳು ಶಾಮೀಲಾಗಿರುವ ಆರೋಪಗಳ ಕುರಿತು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಅರ್ಜಿದಾರರ ಪರ ವಕೀಲ ಪ್ರಶಾಂತ ಭೂಷಣ ಅವರು, ಪ್ರಕರಣದಲ್ಲಿ ಬ್ಯಾಂಕುಗಳು ಮತ್ತು ಅವುಗಳ ಅಧಿಕಾರಿಗಳ ವಿರುದ್ಧ ತನಿಖೆಗೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿಗಳನ್ನು ಸಲ್ಲಿಸುವಂತೆ ಸಿಬಿಐ ಮತ್ತು ಈಡಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೋರಿದರು.

ಅನಿಲ ಅಂಬಾನಿ ನೇತೃತ್ವದ ಎಡಿಎ ಗ್ರೂಪ್‌ನ ಹಲವಾರು ಕಂಪೆನಿಗಳಲ್ಲಿ ಸಾರ್ವಜನಿಕ ಹಣದ ವ್ಯವಸ್ಥಿತ ದುರ್ಬಳಕೆ, ನಕಲಿ ಲೆಕ್ಕಪತ್ರಗಳ ಸೃಷ್ಟಿ ಮತ್ತು ಸಾಂಸ್ಥಿಕ ಶಾಮೀಲಾತಿಯನ್ನು ಪಿಐಎಲ್ ಆರೋಪಿಸಿದೆ.

ಸಂಬಂಧಿತ ಈಡಿವಿಚಾರಣೆಯೊಂದಿಗೆ ಸಿಬಿಐ ಆ.21ರಂದು ದಾಖಲಿಸಿರುವ ಎಫ್‌ಐಆರ್ ಆರೋಪಿತ ವಂಚನೆಯ ಸಣ್ಣ ಭಾಗವೊಂದನ್ನು ಮಾತ್ರ ಉಲ್ಲೇಖಿಸಿದೆ ಎಂದು ಪಿಐಎಲ್ ಹೇಳಿದೆ.

ವಿವರವಾದ ವಿಧಿವಿಜ್ಞಾನ ಲೆಕ್ಕ ಪರಿಶೋಧನೆಗಳು ಗಂಭೀರ ಅಕ್ರಮಗಳನ್ನು ಬೆಟ್ಟು ಮಾಡಿದ್ದರೂ ಈಡಿ ಅಥವಾ ಸಿಬಿಐ ಬ್ಯಾಂಕ್ ಅಧಿಕಾರಿಗಳು,ಲೆಕ್ಕ ಪರಿಶೋಧಕರು ಅಥವಾ ನಿಯಂತ್ರಕರ ಪಾತ್ರದ ಕುರಿತು ತನಿಖೆ ನಡೆಸುತ್ತಿಲ್ಲ ಎಂದು ಹೇಳಿರುವ ಅರ್ಜಿಯು,ಇದನ್ನು ನಿರ್ಣಾಯಕ ವೈಫಲ್ಯ ಎಂದು ಕರೆದಿದೆ.

ಬಾಂಬೆ ಉಚ್ಚ ನ್ಯಾಯಾಲಯದ ತೀರ್ಪಿನಲ್ಲಿ ವ್ಯವಸ್ಥಿತ ವಂಚನೆ ಮತ್ತು ಹಣದ ದುರ್ಬಳಕೆಯನ್ನು ಗುರುತಿಸಲಾಗಿದೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries