ಯುಎಂಇಇಡಿ (UMEED) ಪೋರ್ಟಲ್ ಅಡಿಯಲ್ಲಿ "ಬಳಕೆದಾರರಿಂದ ವಕ್ಫ್" ಸೇರಿದಂತೆ ಎಲ್ಲಾ ವಕ್ಫ್ ಆಸ್ತಿಗಳನ್ನು ಆರು ತಿಂಗಳೊಳಗೆ ಕಡ್ಡಾಯವಾಗಿ ನೋಂದಾಯಿಸುವಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದರಿಂದ, ಈ ಅವಧಿಯನ್ನು ವಿಸ್ತರಿಸಲು ಉವೈಸಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಅಕ್ಟೋಬರ್ 28ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಆದರೆ ಆ ದಿನ ವಿಚಾರಣೆ ನಡೆಯದ ಹಿನ್ನೆಲೆ, ಸೋಮವಾರ ಉವೈಸಿ ಪರವಾಗಿ ಹಾಜರಾದ ವಕೀಲ ನಿಝಾಮ್ ಪಾಷಾ, ವಿಷಯವನ್ನು ತುರ್ತಾಗಿ ಆಲಿಸಬೇಕೆಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ "ನಾವು ಶೀಘ್ರದಲ್ಲೇ ದಿನಾಂಕ ನಿಗದಿಪಡಿಸುತ್ತೇವೆ" ಎಂದರು.
ವಕ್ಫ್ ಆಸ್ತಿಗಳ ನೋಂದಣಿಗೆ ನೀಡಲಾದ ಆರು ತಿಂಗಳ ಅವಧಿ ಈಗ ಮುಗಿಯುತ್ತಾ ಬರುತ್ತಿದೆ. "ತೀರ್ಪು ಬಂದು ಐದು ತಿಂಗಳು ಕಳೆದಿವೆ, ಈಗ ಕೇವಲ ಒಂದು ತಿಂಗಳು ಮಾತ್ರ ಬಾಕಿಯಿದೆ" ಎಂದು ವಕೀಲರು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು.
ಹೊಸದಾಗಿ ತಿದ್ದುಪಡಿ ಮಾಡಲಾದ ಕಾಯ್ದೆಯಡಿ "ಬಳಕೆದಾರರಿಂದ ವಕ್ಫ್" ನಿಬಂಧನೆಯನ್ನು ಅಳಿಸಲು ಕೇಂದ್ರ ಸರಕಾರ ಹೊರಡಿಸಿದ ಆದೇಶದ ವಿರುದ್ಧವೂ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಿಬಂಧನೆಯ ರದ್ದು ಸರಕಾರಗಳಿಗೆ ವಕ್ಫ್ ಭೂಮಿಗಳನ್ನು ವಶಪಡಿಸಿಕೊಳ್ಳಲು ದಾರಿ ಮಾಡಿಕೊಡಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
'ಬಳಕೆದಾರರಿಂದ ವಕ್ಫ್' ಎಂದರೆ, ಆಸ್ತಿಯ ಮಾಲೀಕರು ಲಿಖಿತ ಘೋಷಣೆ ಮಾಡದಿದ್ದರೂ, ಧಾರ್ಮಿಕ ಅಥವಾ ದತ್ತಿ ಉದ್ದೇಶಕ್ಕಾಗಿ ಅದರ ದೀರ್ಘಕಾಲೀನ ಬಳಕೆಯ ಆಧಾರದ ಮೇಲೆ ಆ ಆಸ್ತಿಯನ್ನು ವಕ್ಫ್ ಎಂದು ಗುರುತಿಸುವ ಪದ್ಧತಿಯನ್ನು ಸೂಚಿಸುತ್ತದೆ.
ಕೇಂದ್ರ ಸರಕಾರ ಜೂನ್ 6ರಂದು ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ (UMEED) ಪೋರ್ಟಲ್ ಪ್ರಾರಂಭಿಸಿತ್ತು. ಇದರಡಿ ದೇಶದಾದ್ಯಂತ ಎಲ್ಲಾ ವಕ್ಫ್ ಆಸ್ತಿಗಳನ್ನು ಡಿಜಿಟಲ್ ದಾಖಲೆ ರೂಪದಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.




