ಚಂಡೀಗಡ: ರವಿವಾರ ಬೆಳಿಗ್ಗೆ ಪಂಜಾಬಿನ ಹಲವಾರು ಭಾಗಗಳಿಗೆ ಪತ್ರಿಕೆಗಳು ತಲುಪಿರಲಿಲ್ಲ. ಪೊಲೀಸರು ಪತ್ರಿಕಾ ಸಾಗಾಟದ ವಾಹನಗಳನ್ನು ತಡೆದು ಚಾಲಕರನ್ನು ವಶಕ್ಕೆ ತೆಗೆದುಕೊಂಡು ಅವರನ್ನು ಠಾಣೆಗಳಿಗೆ ಕರೆದೊಯ್ದಿದ್ದರು ಎಂದು ಪತ್ರಿಕೆಗಳ ಏಜೆಂಟ್‌ರು ಹೇಳಿದ್ದಾರೆ.
ಹಲವಾರು ವಾಹನಗಳ ತಪಾಸಣೆ ನಡೆಸಿ ಮುಂದಕ್ಕೆ ಸಾಗಲು ಅನುಮತಿ ನೀಡಲಾಗಿದ್ದರೂ ರಾಜ್ಯದ ಅನೇಕ ಭಾಗಗಳಲ್ಲಿ ಬೆಳಿಗ್ಗೆ 10 ಗಂಟೆಯಾದರೂ ಪತ್ರಿಕೆಗಳ ವಿತರಣೆ ಆಗಿರಲಿಲ್ಲ.
'ಏನು ನಡೆಯುತ್ತಿದೆ ಎನ್ನುವುದು ಮೊದಲು ನನಗೂ ತಿಳಿದಿರಲಿಲ್ಲ,ಈಗ ಕೊಂಚ ಸ್ಪಷ್ಟವಾಗಿದೆ. ಕೆಲವು ವಾಹನಗಳಲ್ಲಿ ಮಾದಕ ದ್ರವ್ಯಗಳು ಮತ್ತು ಮದ್ದುಗುಂಡುಗಳು ಇರಬಹುದು ಎಂಬ ಗುಪ್ತಚರ ಮಾಹಿತಿ ಲಭಿಸಿತ್ತು ಎಂದು ನನಗೆ ತಿಳಿಸಲಾಗಿದೆ. ಹೀಗಾಗಿ ವಾಹನಗಳ ತಪಾಸಣೆ ನಡೆಸಲಾಗಿತ್ತು,ಈಗ ವಾಹನಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈಗಲೂ ಕೆಲವು ವಾಹನಗಳ ತಪಾಸಣೆ ನಡೆಯುತ್ತಿರಬಹುದು ' ಎಂದು ವಿಶೇಷ ಡಿಜಿಪಿ(ಕಾನೂನು ಮತ್ತು ಸುವ್ಯವಸ್ಥೆ) ಅರ್ಪಿತ್ ಶುಕ್ಲಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಈ ನಡುವೆ ಪಂಜಾಬಿನಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ನಡೆಯುತ್ತಿದೆ ಎಂದು ಪ್ರತಿಪಕ್ಷ ಆರೋಪಿಸಿದೆ.
ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪಂಜಾಬಿನ ಅಧಿಕೃತ ನಿವಾಸ ಸಂಖ್ಯೆ 5ರಲ್ಲಿ ತಂಗಿದ್ದಾರೆ ಎಂಬ ಸುದ್ದಿ ಸಾರ್ವಜನಿಕರಿಗೆ ತಲುಪುವುದನ್ನು ತಡೆಯಲು ಭಗವಂತ ಮಾನ್ ಸರಕಾರವು ರಾಜ್ಯಾದ್ಯಂತ ದಾಳಿಗಳನ್ನು ನಡೆಸಿ ಪತ್ರಿಕೆಗಳ ವಿತರಣೆಗೆ ಅಡ್ಡಿಯನ್ನುಂಟು ಮಾಡಿದೆ ಎಂದು ವರದಿಯಾಗಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ಎಐಸಿಸಿ ಕಾರ್ಯದರ್ಶಿ ಪರ್ಗತ್ ಸಿಂಗ್ ಅವರು, ದಿಲ್ಲಿಯ ಲಾಬಿಗಾಗಿ ಪಂಜಾಬಿನ ಖಜಾನೆಯನ್ನು ಲೂಟಿ ಮಾಡುತ್ತಿರುವುದು ರಹಸ್ಯವಾಗಿ ಉಳಿದಿಲ್ಲ, ಆದರೆ ಸತ್ಯವನ್ನು ಮರೆ ಮಾಚಲು ಈಗ ಪತ್ರಿಕೆಗಳನ್ನೂ ನಿಲ್ಲಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದು ಆಡಳಿತವಲ್ಲ,ಇದು ಪಂಜಾಬಿನಲ್ಲಿ ಸದ್ದಿಲ್ಲದೆ ಹೇರಲಾಗುತ್ತಿರುವ ತುರ್ತು ಪರಿಸ್ಥಿತಿ. ಪಂಜಾಬ್ ಇದನ್ನು ಸಹಿಸುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ನಿಷಿದ್ಧ ವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಸಾರ್ವಜನಿಕರಿಗೆ ಯಾವುದೇ ಅನಾನುಕೂಲ ಉಂಟಾಗದಂತೆ ಆಯ್ದ ಸ್ಥಳಗಳಲ್ಲಿ ಗೆಝೆಟೆಡ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ವ್ಯವಸ್ಥಿತವಾಗಿ ಮತ್ತು ಕ್ರಮಬದ್ಧವಾಗಿ ವಾಹನಗಳ ತಪಾಸಣೆ ನಡೆಸಲಾಗಿದೆ ಎಂದು ಪಂಜಾಬ್ ಪೊಲೀಸ್ ವಕ್ತಾರರು ತಿಳಿಸಿದರು.

