ಕಾಸರಗೋಡು: ವಿವಿಧ ಜಾತಿ ಮತ್ತು ಸಮುದಾಯಗಳ ನಡುವೆ ಧಾರ್ಮಿಕ, ಜನಾಂಗೀಯ ಅಥವಾ ಭಾಷಾ ಸಂಘರ್ಷ ಉಂಟುಮಾಡುವ ಹಾಗೂ ಶಾಂತಿ ಕದಡುವ ರೀತಿಯ ಚಟುವಟಿಕೆಗಳಲ್ಲಿ ರಾಜಕೀಯ ಪಕ್ಷಗಳ ಸದಸ್ಯರು ಅಥವಾ ಅಭ್ಯರ್ಥಿಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಹತ್ತು ಸಾವಿರ ರೂಪಾಯಿ ದಂಡ ಅಥವಾ ಎರಡೂ ಶಿಕ್ಷೆ ವಿಧಿಸಲಾಗುವುದು.
ಕೇರಳ ಪಂಚಾಯಿತಿ ರಾಜ್ ಕಾಯ್ದೆ, 1994 ರ ಸೆಕ್ಷನ್ 121, ಕೇರಳ ನಗರಸಭಾ ಕಾಯ್ದೆಯ ಸೆಕ್ಷನ್ 145ರ ಅನ್ವಯ ಜಾತಿ ಮತ್ತು ಸಮುದಾಯದ ಹೆಸರಿನಲ್ಲಿ ಮತ ಯಾಚಿಸಬಾರದು. ಮಸೀದಿ, ದೇವಾಲಯ, ಇಗರ್ಜಿ ಸೇರಿದಂತೆ ಇತರ ಪೂಜಾ ಸ್ಥಳಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳದಿರುವಂತೆಯೂ ಸೂಚಿಸಲಾಗಿದೆ. ರಾಜ್ಯ ಚುನಾವಣಾ ಆಯೋಗ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವುದರೊಂದಿಗೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.




