ಕಾಸರಗೋಡು: ತನ್ನ ಮನೆಯ ವಿದ್ಯುತ್ ವಿಚ್ಛೇದಿಸಿದ ಕೆಎಸ್‍ಇಬಿ ಕ್ರಮದಿಂದ ರೊಚ್ಚಿಗೆದ್ದು ನಗರದ ಹಲವು ವಿದ್ಯುತ್ ಟ್ರಾನ್ಸ್ಫರ್ಮರ್‍ಗಳ ಫ್ಯೂಸ್ ಕಿತ್ತೆಸೆದು ಪುಂಡಾಟಿಕೆ ಮೆರೆದಿದ್ದ ಯುವಕನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೂಡ್ಲು ಸೂರ್ಲು ಹೈದ್ರೋಸ್ ಮಸೀದಿ ಸನಿಹದ ನಿವಾಸಿ ಪಿ. ಎಂ. ಮುಹಮ್ಮದ್ ಮುನವ್ವರ್ (35) ಬಂಧಿತ. ಕಳೆದ ಎರಡು ತಿಂಗಳ ವರೆಗೆ ತನಗೆ ಲಭಿಸಿದ್ದ ದುಬಾರಿ ವಿದ್ಯುತ್ ಶುಲ್ಕ ಬಿಲ್ ಪಾವತಿಗಿರುವ ಅಂತಿಮ ದಿನಾಂಕ ಕಳೆದರೂ ಪಾವತಿಸದೇ ಬಾಕಿ ಇದ್ದ ಕಾರಣ ಈತನ ಮನೆಯ ವಿದ್ಯುತ್ ಸಂಪರ್ಕವನ್ನು ಕೆಎಸ್‍ಇಬಿ ಸಿಬಂದಿ ವಿಚ್ಛೇದಿಸಿದ್ದರು. ಇದರಿಂದ ಸಿಟ್ಟಿಗೆದ್ದ ಈತ ವಿದ್ಯುತ್ ಕಚೇರಿಗೆ ತೆರಳಿ ದಾಂಧಲೆ ನಡೆಸಿದ್ದನು. ಬಳಿಕ ನೆಲ್ಲಿಕುಂಜೆ, ಕಾಸರಗೋಡು ವಿದ್ಯುತ್ ಸೆಕ್ಷನ್ ವ್ಯಾಪ್ತಿಯ ಹಲವು ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಗಳಿಂದ ಫ್ಯೂಸ್ ಕಳಚಿ ಎಸೆದಿದ್ದು, ಈತನ ಕೃತ್ಯದಿಂದ ಟ್ರಾನ್ಸ್ಫೋರ್ಮರ್‍ಗಳಿಗೂಹಾನಿಯುಂಟಾಗಿತ್ತು. ಹಲವಾರು ಮನೆಗಳು, ನಗರದ ಅಂಗಡಿ ಮುಂಗಟ್ಟು, ವಿವಿಧ ಕಿರು ಉದ್ದಿಮಮೆಗಳು ತಾಸುಗಳ ಕಾಲ ವಿದ್ಯುತ್ ಸ್ಥಗಿತಗೊಂಡು ಸಂಕಷ್ಟ ಅನುಭವಿಸುವಂತಾಗಿತ್ತು. ಕೆಎಸ್‍ಇಬಿ ಅಧಿಕಾರಿಗಳು ನೀಡಿದ ದೂರಿನನ್ವಯ ಕಾಸರಗೋಡು ನಗರ ಠಾಣೆಯ ಎಸ್. ಐ ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ.




