ಕಾಸರಗೋಡು: ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ಬೆಳ್ಳಿ ಹಬ್ಬಾಚರಣೆ"ರಜತ ರಂಗ"ದ ಚತುರ್ಥ ಕಾರ್ಯಕ್ರಮ ನ.23ರಂದು ನಗರದ ಪೇಟೆ ಶ್ರೀ ವೆಂಕಟ್ರಮಣ ದೇವಾಲಯದ ವ್ಯಾಸಮಂಟಪದಲ್ಲಿ ನಡೆಯಲಿದೆ.
ಎಸ್.ವಿ.ಟಿ.ರಸ್ತೆಯ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾಸಂಘದ ಪ್ರಾಯೋಜಕತ್ವದಲ್ಲಿ ನಡೆಯುವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಸೋಮವಾರ ಎಡನೀರು ಶ್ರೀ ಮಠದಲ್ಲಿ ನಡೆಯಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿ, ಆಶೀರ್ವಚನ ನೀಡಿದರು. ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ರಜತರಂಗದ ಪದಾಧಿಕಾರಿಗಳಾದ ಚಂದ್ರಮೋಹನ ಕೂಡ್ಲು, ಕಿಶೋರ್ ಕುಮಾರ್ ಕೂಡ್ಲು, ವಿಘ್ನೇಶ ಕಾರಂತ ಕೂಡ್ಲು, ಪತ್ರಕರ್ತ ವೀಜಿ ಕಾಸರಗೋಡು ಉಪಸ್ಥಿತರಿದ್ದರು.
ನ.23ರಂದು ಬೆಳಗ್ಗೆ 10ಕ್ಕೆ ನಡೆಯುವ ಸಮಾರಂಭವನ್ನು ಎಡನಿರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಸ್ಣು ಅಸ್ರ ದಿವ್ಯ ಉಪಸ್ಥಿತರಿರುವರು. ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು. ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನದ ಸಂಸ್ಥಾಪಕ ಡಾ.ಕೆ.ವಾಮನರಾವ್ ಬೇಕಲ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ದಿನೇಶ್, ಧಾರ್ಮಿಕ ಮುಂದಾಳು ರಾಮಪ್ರಸಾದ್ ಕಾಸರಗೋಡು, ಕುತ್ಯಾಳ ರಜತ ಮಹೋತ್ಸವದ ಅಧ್ಯಕ್ಷ ಡಾ.ಹರಿಕಿರಣ್ ಬಂಗೇರ, ಜ್ಯೋತಿಷಿ ಸಿ.ವಿ.ಪೆÇದುವಾಳ್ ಉಪಸ್ಥಿತರಿರುವರು.
ಹಿರಿಯ ಕಲಾವಿದರಾದ ಬಣ್ಣದ ಕುಟ್ಯಪ್ಪು ಅವರ ಕುರಿತು ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಕೂಡ್ಲು ಆನಂದ ಅವರ ಕುರಿತು ಪತ್ರಕರ್ತ ವೀಜಿ ಕಾಸರಗೋಡು ಸಂಸ್ಮರಣಾ ಭಾಷಣ ಮಾಡುವರು. ಮಧ್ಯಾಹ್ನ 12 ಗಂಟೆಗೆ ಪ್ರಸಿದ್ಧ ಕಲಾವಿದರಿಂದ "ಕೀಚಕ ವಧೆ" ತಾಳಮದ್ದಲೆ, 2 ಗಂಟೆಯಿಂದ ತರಬೇತಿ ಕೇಂದ್ರದ ಸದಸ್ಯರಿಂದ "ಕರ್ಣಾರ್ಜುನ" ಯಕ್ಷಗಾನ ಪ್ರದರ್ಶನ ಜರುಗಲಿರುವುದು.





