ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಾಪಾರಿಯೊಬ್ಬರ ಒಂದೂಕಾಲು ಲಕ್ಷ ರೂ. ಬೆಲೆಯುಳ್ಳ ಮೊಬೈಲ್ ಮತ್ತು ಏಳು ಸಾವಿರ ರೂ. ನಗದು ಹೊಂದಿದ ಬ್ಯಾಗ್ ಕಳವುಗೈದ ಆರೋಪಿ, ಓಙಲ್ಲೂರ್ ಕುನ್ನುಂಪುರತ್ ನಿವಾಸಿ ಸೈನುಲ್ ಆಬಿದೀನ್ ಎಂಬಾತನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಮಂಗಳಾ ಎಕ್ಸ್‍ಪ್ರೆಸ್ ರೈನಲ್ಲಿ ಕಾಞಂಗಾಡಿನಿಂದ ಎರ್ನಾಕುಳಂಗೆ ಸಂಚರಿಸುವ ಮಧ್ಯೆ ವ್ಯಾಪಾರಿ, ಕಾಞಂಗಾಡು ನಿವಾಸಿ ಸಿ.ಕೆ ಅಜೀಜ್ ಎಂಬವರ ಮೊಬೈಲ್, ನಗದು ಹೊಂದಿದ ಬ್ಯಾಗನ್ನು ಕಳವುಗೈಯಲಾಗಿತ್ತು. ವಾತಾನುಕೂಲಿತ ಬೋಗಿಯಲ್ಲಿ ಪ್ರಯಾಣ ನಡೆಸುತ್ತಿದ್ದ ಅಜೀಜ್, ರೈಲು ಶೋರ್ನೂರ್ ಜಂಕ್ಷನ್ ತಲುಪುತ್ತಿದ್ದಂತೆ ನಿದ್ದೆಯಿಂದೆ ಎಚ್ಚೆತ್ತು ನೋಡಿದಾಗ ಬ್ಯಾಗ್ ನಾಪತ್ತೆಯಾಗಿತ್ತು. ತಕ್ಷಣ ಶೋರ್ನೂರ್ ಠಾಣೆ ಪೊಲೀಸರಿಗೆ ಅಜೀಜ್ ದೂರುನೀಡಿದ್ದು, ಪೊಲೀಸರು ಕೋಯಿಕ್ಕೋಡಿನಿಂದ ಶೋರ್ನೂರ್ ವರೆಗಿನ ಸಿಸಿ ಕ್ಯಾಮರಾ ತಪಾಸಣೆ ನಡೆಸಿದಾಗ ಆರೋಪಿ ಬ್ಯಾಗಿನೊಂದಿಗೆ ಪಟ್ಟಾಂಬಿಯಲ್ಲಿ ರೈಲಿನಿಂದ ಇಳಿದು ತೆರಳುವುದು ಪತ್ತೆಯಾಗಿತ್ತು. ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಿಂದ ಆರೋಪಿಯನ್ನು ಶೋರ್ನೂರ್‍ನಿಂದ ಸೆರೆಹಿಡಿಯಲಾಗಿದೆ.





