ಕಾಸರಗೋಡು: ಕೇರಳ ಮತ್ತು ಕರ್ನಾಟಕ ರಾಜ್ಯಗಳು ತನ್ನ 70ನೇ ರಾಜ್ಯೋತ್ಸವದ ಸಂಭ್ರಮದಲ್ಲಿದ್ದರೆ, ಗಡಿನಾಡು ಕಾಸರಗೋಡಿನ ಕನ್ನಡಿಗರನ್ನು ಹಕ್ಕೊತ್ತಾಯದ ಜತೆಗೆ ಕರಾಳ ದಿನಾಚರಣೆಯತ್ತ ಕೇರಳ ಸರ್ಕಾರ ಒಯ್ಯುವಂತೆ ಮಾಡಿರುವುದು ದೌರ್ಭಾಗ್ಯಕರ ಎಂದು ಹಿರಿಯ ಪತ್ರಕರ್ತ, ಕನ್ನಡ ಹೋರಾಟಗಾರ ಮಲಾರ್ ಜಯರಾಮ ರೈ ತಿಳಿಸಿದ್ದಾರೆ.
ಅವರು ಕರ್ನಾಟಕ ಸಮಿತಿ ಕಾಸರಗೋಡು ಜಿಲ್ಲಾ ಘಟಕದಿಂದ ಕೇರಳ ರಾಜ್ಯೋದಯ ದಿನವಾದ ನ. 1ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಲಾದ ಗಡಿನಾಡು ಕನ್ನಡಿಗರ ಹಕ್ಕೊತ್ತಾಯ ದಿನಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧರಣಿ ಉದ್ಘಾಟಿಸಿ ಮಾತನಾಡಿದರು.
ಬಹುಭಾಷಾ ಸಂಸ್ಕøತಿ ಹೊಂದಿರುವ ಕಾಸರಗೋಡಿನಲ್ಲಿ, ಇಲ್ಲಿನ ಬಹುಭಾಷಿಗರನ್ನು ಬೆಸೆಯುವ ಕನ್ನಡ ಭಾಷೆಯನ್ನೇ ದಮನಿಸುವ ಕೆಲಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರೆಲ್ಲರೂ ಒಟ್ಟಾಗಿ ಧ್ವನಿಯೆತ್ತುವ ಕಾಲ ಸನ್ನಿಹಿತವಾಗಿದೆ. ಪ್ರೀತಿಯಿದ್ದಲ್ಲಿ ಎಂದಿಗೂ ಭೀತಿಯಿರಲು ಸಾಧ್ಯವಿಲ್ಲ. ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯ. ಕಾಸರಗೋಡಿನ ಕನ್ನಡಿಗರು ಬಹುಭಾಷಾ ಪ್ರವೀಣರುಮಾತ್ರವಲ್ಲ, ಎಂದೆಂದಿಗೂ ಶಾಂತಿಪ್ರಿಯರು. ಯಾವುದೇ ಭಾಷೆಗೂ ಇಲ್ಲಿನ ಕನ್ನಡಿಗರು ಇದಿರಲ್ಲ. ಆದರೆ ಏಕಾಏಕಿ ಕನ್ನಡಿಗರ ಮೇಲೆ ಮಲಯಾಳ ಹೇರುವ ಮೂಲಕ ಇಲ್ಲಿನ ಜನತೆಯೆ ಉಸಿರಾಗಿರುವ ಕನ್ನಡವನ್ನು ದಮನಿಸುವ ಸರ್ಕಾರದ ಧೋರಣೆಯನ್ನು ಕನ್ನಡಿಗರು ಎಂದಿಗೂ ಸಹಿಸಲು ಸಾಧ್ಯವಿಲ್ಲ. ಕನ್ನಡಿಗರೆಲ್ಲರೂ ಭೇದಭಾವ ಮರೆತು ಕನ್ನಡ ಉಳಿವಿಗಾಗಿ ಹೋರಾಡುವ ಅಗತ್ಯವಿದೆ. ಇದೇ ಉದ್ದಶದಿಂದ ಕಾಸರಗೋಡಿನ ಎಲ್ಲಾ ಕನ್ನಡಪರ ಸಂಘಟನೆಗಳನ್ನು ಒಟ್ಟುಸೇರಿಸಿ ಧರಣಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಸಮಿತಿ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ, ವಕೀಲ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇರಳ ರಾಜ್ಯೋದಯವಾದಂದಿನಿಂದ ಗಡಿನಾಡು ಕಾಸಸರಗೋಡಿನ ಮೂಲ ನಿವಾಸಿಗಳಾದ ಭಾಷಾ ಅಲ್ಪಸಂಖ್ಯಾತ ಕನ್ನಡಿಗರು ಅತಂತ್ರ ಭಾವನೆ ಎದುರಿಸುತ್ತಿದ್ದು, ಏಳು ದಶಕದ ನಂತರವೂ ಇದಕ್ಕೆ ಪರಿಹಾರ ಲಭಿಸದಿರುವುದು ದುರಾದೃಷ್ಟಕರ. ಕಾಸರಗೋಡಿನ ಕನ್ನಡಿಗರು ಸಂವಿಧಾನಾತ್ಮಕವಾಗಿ ಪಡೆದಿರುವ ಕೆಲವೊಂದು ಸವಲತ್ತುಗಳನ್ನು ಸರ್ಕಾರ ಕಸಿದುಕೊಂಡಿದೆ. ಇಲ್ಲಿನ ಕನ್ನಡಿಗರಿಗೆ ಕಡ್ಡಾಯ ಮಲಯಾಳ ಹೇರಿಕೆಯ ತೂಗುಗತ್ತಿಯ ನಡುವೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿರುವುದಾಗಿ ತಿಳಿಸಿದರು.
ಕಸಾಪ ಕೇರಳ ಗಡಿನಾಡ ಘಟಕದ ವಿಶಾಲಾಕ್ಷ ಪುತ್ರಕಳ ಮುಖ್ಯ ಭಾಷಣ ಮಾಡಿ, ಕನ್ನಡಿಗರ ಮೇಲೆ ಕಡ್ಡಾಯ ಮಲಯಾಳ ಹೇರಿಕೆ ಕೈಬಿಡುವುದರ ಜತೆಗೆ ಕೇರಳದಲ್ಲಿ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಹಿತಕಾಪಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಗಡಿನಾಡಿನಲ್ಲಿ ಕನ್ನಡವನ್ನು ದಮನಿಸುವ ಕೆಲಸ ಅಂಗನವಾಡಿಯಿಂದಲೇ ಆರಂಭಗೊಳ್ಳುತ್ತಿದ್ದು, ಮಲಯಾಳವನ್ನು ಕಡ್ಡಾಯವಾಗಿ ಹೇರುವ ಕೆಲಸ ನಡೆಯುತ್ತಿದೆ. ಕನ್ನಡ ಮಾಧ್ಯಮ ಅಂಗನವಾಡಿ ಶಿಕ್ಷಕಿಯರಿಗಾಗಲಿ, ಶಾಲಾ ಶಿಕ್ಷಕರಿಗಾಗಲಿ ಕನ್ನಡದ ಕೈಪಿಡಿ ಪೂರೈಸದೆ ಸರ್ಕಾರ ಅನಿವಾರ್ಯವಾಗಿ ಕನ್ನಡಿಗರ ಮೇಲೆ ಮಲಯಾಳ ಹೇರುತ್ತಿದೆ.
ಟಿ. ಶಂಕರನಾರಾಯಣ ಭಟ್, ಸತೀಸ್ ಕುಮಾರ್ ಕೂಡ್ಲು, ವಕೀಲ ಎಂ. ನಾರಾಯಣ ಭಟ್, ಕುಂಟಾರು ರವೀಶ ತಂತ್ರಿ, ಸತೀಶ್ ಅಡಪ ಸಂಕಬೈಲ್, ಲಕ್ಷ್ಮಣ ಪ್ರಭು ಕುಂಬಳೆ, ಎಂ. ಉಮೇಶ ಸಾಲ್ಯಾನ್, ಕೆ. ಭಾಸ್ಕರ, ಶಿವರಾಮ ಕಾಸರಗೋಡು, ವಕೀಲ ಕೆ. ಶ್ರೀಕಾಂತ್ , ಅರಿಬೈಲ್ ಗೋಪಾಲ ಶೆಟ್ಟಿ, ಪ್ರೊ. ಎ.ಶ್ರೀನಾಥ್, ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಕನ್ನಡ ಅಧ್ಯಾಪಕರ ಸಂಘದ ಸುಕೇಶ್, ವಿ.ಬಿ ಕುಳಮರ್ವ, ಡಾ. ವೆಂಕಟ್ರಮಣ ಹೊಳ್ಳ, ಬೇ.ಸಿಗೋಪಾಲಕೃಷ್ಣ ಭಟ್, ಗಣಪತಿ ಭಟ್ ಬದಿಯಡ್ಕ, ಎಂ. ಸಂಜೀವ ಶೆಟ್ಟಿ, ಕಾಸರಗೋಡು ಚಿನ್ನಾ, ಕಾಸರಗೋಡು ಸರ್ಕಾರಿ ಕಾಲೇಜು ಸ್ನೇಹರಂಗದ ವಿವೇಕ್, ಜಯನಾರಾಯಣ ತಾಯನ್ನೂರ್, ಗಣೇಶ್‍ಪ್ರಸಾದ್ ಪಾಣೂರು, ಎನ್.ಕೆ ಮೋಹನದಾಸ್, ಪ್ರದೀಪ್‍ಕುಮಾರ್ ಶೆಟ್ಟಿ ಬೇಳ, ಸವಿತಾ ಟೀಚರ್, ಗುರುಪ್ರಸಾದ್ ಕೋಟೆಕಣಿ, ಸತ್ಯನಾರಾಯಣ ತಂತ್ರಿ, ಜಯಾನಂದಕುಮಾರ್ ಹೊಸದುರ್ಗ ಮೊದಲಾದವರು ಉಪಸ್ಥಿತರಿದ್ದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಿವಿಧ ಕನ್ನಡ ಸಂಗಟನೆ ಪದಾಧಿಕಾರಿಗಳು, ಶಿಕ್ಷಕರು ಸೇರಿದಂತೆ ನೂರಾರು ಮಂದಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪತ್ರಕರ್ತ ವೀಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಗುರುಪ್ರಸಾದ್ ಕೋಟೆಕಣಿ ವಂದಿಸಿದರು.
ಎಡಿಎಂಗೆ ಮನವಿ:
ಕರಾಳ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೆರಿ ಎದುರು ನಡೆದ ಧರಣಿಯಲ್ಲಿ ಕೈಗೊಳ್ಳಲಾಗಿದ್ದ 18ಬೇಡಿಕೆಗಳುಳ್ಳ ಮನವಿಯನ್ನು ಕನ್ನಡ ಹೋರಾಟಗಾರರ ನಿಯೋಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ)ಪಿ. ಅಖಿಲ್ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ವಕೀಲ ಮುರಳೀಧರ ಬಳ್ಳಕ್ಕುರಾಯ, ಮಲಾರ್ ಜಯರಾಮ ರೈ, ಡಾ. ಜಯಪ್ರಕಾಶ್‍ನಾರಾಯಣ ತೊಟ್ಟೆತ್ತೋಡಿ, ಅರಿಬೈಲು ಗೋಪಾಲ ಶೆಟ್ಟಿ, ಟಿ. ಶಂಕರನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.



