ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಮುದ್ರಣ ಸಂಸ್ಥೆಗಳಿಗೆ ದಾಳಿ ನಡೆಸಿದ ಎನ್‍ಫೋರ್ಸ್‍ಮೆಂಟ್ ಅಧಿಕಾರಿಗಳು ನಿಷೇಧಿತ ಪಿವಿಸಿ ಫ್ಲೆಕ್ಸ್ ಬ್ಯಾನರ್ ಮೆಟೀರಿಯಲ್ ವಶಪಡಿಸಿಕೊಂಡು, ಸಂಬಂಧಪಟ್ಟ ಸಂಸ್ಥೆ ಮಾಲಿಕರಿಗೆ 25ಸಾವಿರ ರೂ. ದಂಡ ವಿಧಿಸಿದ್ದಾರೆ. ವಶಪಡಿಸಿಕೊಂಡಿರುವ ಚುನಾವಣಾ ಸಾಮಗ್ರಿಗಳಲ್ಲಿ ಮಾನದಂಡಗಳ ಸ್ಪಷ್ಟ ಉಲ್ಲಂಘನೆಯನ್ನೂ ಪತ್ತೆಹಚ್ಚಲಾಗಿದೆ. ಮುದ್ರಣಗೊಂಡಿರುವ ಕೆಲವೊಂದು ಫ್ಲಕ್ಸ್,ಬ್ಯಾನರ್‍ಗಳಲ್ಲಿ ಕ್ಯೂಆರ್ ಕೋಡ್, ರೀಸೈಕ್ಲಿಂಗ್ ಲೋಗೋ, ಮುದ್ರಣ ಸಂಸ್ಥೆ ವಿಳಾಸವೂ ನಮೂದಾಗಿರಲಲ್ಲ.
ಗಡಿಪ್ರದೇಶದಲ್ಲಿ ಮಂಗಳೂರು ಸೇರಿದಂತೆ ಇತರ ಪ್ರದೇಶದಿಂದ ನಿಷೇಧಿತ ಫ್ಲೆಕ್ಸ್ ಮೆಟೀರಿಯಲ್, ಪ್ರಚಾರ ಬೋರ್ಡುಗಳನ್ನು ಅನಧಿಕೃತವಾಗಿ ತರಿಸಿಕೊಳ್ಳುತ್ತಿರುವ ಬಗ್ಗೆ ಲಭಿಸಿರುವ ಮಾಹಿತಿಯನ್ವಯ ತಪಾಸಣೆ ಚುರುಕುಗೊಳಿಸಲಾಗುತ್ತಿದೆ.





