ಕಾಸರಗೋಡು: ತನ್ನ ಪತಿ ವಿದೇಶಕ್ಕೆ ತೆರಳುತ್ತಿದ್ದಂತೆ ಗೃಹಿಣಿಯೊಬ್ಬಳು ತನ್ನ ಇಬ್ಬರು ಸಣ್ಣ ಮಕ್ಕಳನ್ನು ತೊರೆದು ಪ್ರಿಯತಮನೊಂದಿಗೆ ಪರಾರಿಯಾಗಿದ್ದು, ನಂತರಪೊಲೀಸರು ನಡೆಸಿದ ಕಾರ್ಯಾಚರಣೆಯಿಂದ ಜೋಡಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ತಳಿಪರಂಬ ಪನ್ನಿಯೂರ್ ಮಳೂರ್ ನಿವಾಸಿ ಕೆ. ನೀತು(35) ಹಾಗೂ ಈಕೆಪ್ರಿಯತಮ ಸುಮೇಶ್ ಬಂಧಿತರು. ಮೇಲ್ಪರಂಬ ಪೊಲೀಸ್ ಠಾಣೆಯ ಕ್ವಾಟ್ರಸ್ ಒಂದರಿಂದ ಕಾರಿನಲ್ಲಿ ತೆರಳುತ್ತಿರುವ ಮಧ್ಯೆ ಚಿತ್ತಾರಿಕ್ಕಲ್ ಠಾಣೆ ಎಎಸ್‍ಐ ಶ್ರೀಜು ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದಾರೆ. ನಾಪತ್ತೆಯಾಗಿರುವ ಜೋಡಿಯನ್ನು ಪತ್ತೆಹಚ್ಚಲು ಎಸ್.ಐ ಮಧುಸೂಧನ್ ಮಡಿಕೈ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಮುಂದುವರಿಯುತ್ತಿರುವ ಮಧ್ಯೆ, ಜೋಡಿ ಚಟ್ಟಂಚಾಲಿನ ಕ್ವಾಟ್ರಸ್ ಒಂದರಲ್ಲಿ ತಂಗಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಪೊಲೀಸರು ಕಾರ್ಯಾಚರಣೆಗೆ ಮುಂದಾಗುತ್ತಿದ್ದಂತೆ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಲು ಯತ್ನಿಸುವ ಮಧ್ಯೆ ಇವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಶುಕ್ರವಾರ ನೀತು ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಮನೆಯಿಂದ ನಾಪತ್ತೆಯಾಗಿದ್ದಳು. ಇದೇ ಸಂದರ್ಭ ಸುಮೇಶ್ ಕೂಡಾ ನಾಪತ್ತೆಯಾಗಿದ್ದ ಬಗ್ಗೆ ತಳಿಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ನೀತು ನಾಪತ್ತೆಯಾಗುವ ಎರಡು ದಿವಸಗಳ ಹಿಂದೆ ಈಕೆ ಪತಿ ವಿದೇಶಕ್ಕೆ ತೆರಳಿದ್ದನು.




