ಕಾಸರಗೋಡು: ಕೋಡೋಂ ಬೇಳೂರು ಪಂಚಾಯಿತಿಯ ಮುಟ್ಟಿಚ್ಚೇರಿಲ್ ನಿವಾಸಿಯಾಗಿರುವ ಕುಟ್ಟಿಯಮ್ಮ ಅವರ ಸ್ವಂತ ಸೂರಿನ ಕನಸು ಕೊನೆಗೂ ನನಸಾಗಿದೆ. ಕಡು ಬಡತನ ನಿರ್ಮೂಲನಾ ಯೋಜನೆಯ ಅಂಗವಾಗಿ ಬಡತನ ಮುಕ್ತ ಜಿಲ್ಲೆಯಲ್ಲಿರುವ 2072 ಕುಟುಂಬಗಳಲ್ಲಿ ಕುಟ್ಟಿಯಮ್ಮ ಅವರ ಕುಟುಂಬವೂ ಒಂದಾಗಿದೆ. ಕೊಟ್ಟಾಯಂ ತಮ್ಮ ಹುಟ್ಟೂರಾಗಿದ್ದು, ತಮ್ಮ 50ನೇ ವಯಸ್ಸಿನಲ್ಲಿ ಕಾಸರಗೋಡಿಗೆ ಬಂದು ಜೋಪಡಿಯಲ್ಲಿ ನೆಲೆಸಿರುವ ಕುಟ್ಟಿಯಮ್ಮ ಸ್ವಂತ ಸೂರಿಗಾಗಿ ಕಳೆದ ಹಲವು ವರ್ಷಗಳಿಂದ ಕಾದುಕುಳಿತಿದ್ದ ಇವರಿಗೆ ಕೊನೆಗೂ ಮನೆ ಮಂಜೂರಾಗಿ ಲಭಿಸಿದೆ. ಅನಾರೋಗ್ಯದ ಕಾರಣ ಕೆಲಸ ಮಾಡಿ ಜೀವನ ಸಾಗಿಸಲು ಸಾಧ್ಯವಾಗದ ಇವರು, ಸರ್ಕಾರಿ ಜಮೀನಿನಲ್ಲಿ ತಾಳೆ ಎಲೆ ಮತ್ತು ಪ್ಲಾಸ್ಟಿಕ್‍ನಿಂದ ನಿರ್ಮಿಸಿದ ಜೋಪಡಿಯಲ್ಲಿ ಕಾಲ ಕಳೆಯುತ್ತಿದ್ದರು. ಮಳೆಗಾಲ ಬಂದರೆ ಕುಟ್ಟಿಯಮ್ಮನಲ್ಲಿ ಕಾಡುತ್ತಿದ್ದ ಇವರ ಆತಂಕ, ಮನೆ ನಿರ್ಮಾಣದೊಂದಿಗೆ ದೂರಾಗಿದೆ.
ಗಾಳಿ ಮತ್ತು ಮಳೆ ಬಂದರೂ ಸುರಕ್ಷಿತವಾಗಿ ವಾಸಿಸಬಹುದಾದ ಸ್ವಂತ ಮನೆ ಕುಟ್ಟಿಯಮ್ಮನ ಪಾಲಿಗೆ ಲಭಿಸಿದೆ. ಆರಂಭದಲ್ಲಿ ಇವರನ್ನು ಸರ್ಕಾರಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದರೂ, ಇವರ ವಯಸ್ಸು ಮತ್ತು ಒಂಟಿ ಜೀವನ ಪರಿಗಣಿಸಿ ಮನೆ ಮಂಜೂರುಮಾಡಿಕೊಡಲಾಗಿದೆ.
ತಾನು ನೆಲೆಸಿರುವ ಜಾಗ ಬಿಟ್ಟು ಕದಲಲು ತಯಾರಾಗದ ಕುಟ್ಟಿಯಮ್ಮ, ತಾನು ಜೋಪಡಿ ನಿರ್ಮಿಸಿದ ಜಾಗದಲ್ಲೇ ಉತ್ತಮ ಸೂರು ನಿರ್ಮಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮಾಡಿಕೊಂಡ ಮನವಿಪರಿಗಣಿಸಿ, ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಅದೇ ಸ್ಥಳದಲ್ಲಿ ಲೈಫ್ ವಸತಿ ಯೋಜನೆಯನ್ವಯ ಮನೆ ನಿರ್ಮಿಸಿಕೊಟ್ಟಿದ್ದಾರೆ. ಇದರೊಂದಿಗೆ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿಯನ್ನೂ ನೀಡಲಾಗಿದ್ದು, ಒಟ್ಟಿನಲ್ಲಿ ಕುಟ್ಟಿಯಮ್ಮ ಸಂತೃಪ್ತ ನಗೆ ಬೀರಿದ್ದಾರೆ.





