ಮಂಗಳೂರು: ಕಳೆದ ಎರಡು ದಶಕಗಳಿಂದ ಭಾರತೀಯರ ಆನುವಂಶಿಕ ಮೂಲವನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಭಾರತೀಯರ ಮತ್ತೊಂದು ಪೂರ್ವಜರ ಮೂಲ ʼಪ್ರೊಟೋ-ದ್ರಾವಿಡಿಯನ್ʼ ಪತ್ತೆಯಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಯೆನೆಪೊಯ ಡೀಮ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರಾದ ಡಾ.ಎಂ.ಎಸ್.ಮುಸ್ತಾಕ್, ಡಾ.ರಣಜಿತ್ ದಾಸ್, ಡಾ. ಜೈಸನ್ ಸಿಕ್ವೇರಾ ಹೇಳಿದ್ದಾರೆ.
ನಗರದ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಬುಧವಾರ ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಅವರ ಸಮ್ಮುಖ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ವಿವಿ ಜೀವಿಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಎಂ.ಎಸ್.ಮುಸ್ತಾಕ್ ದೇಶದ 75 ಪ್ರಿಮಿಟಿವ್ ಟ್ರೈಬ್ಸ್‌ಗಳಲ್ಲಿ ಕೊರಗ ಜನಾಂಗ ಕೂಡಾ ಒಂದಾಗಿದೆ. ಕೊರಗರ ಮೂಲದ ಕುರಿತು ಇದೀಗ ಮಹತ್ವದ ಫಲಿತಾಂಶ ಲಭ್ಯವಾಗಿದೆ. ಅಂದರೆ ಕೊರಗ ಜನಾಂಗದವರ ವಂಶವಾಹಿಗಳಲ್ಲಿ 4,400 ವರ್ಷಗಳ ಹಿಂದೆ ಇರಾನ್ ಸಮತಲ ಪ್ರದೇಶ ಹಾಗೂ ಸಿಂಧೂ ನದಿ ಪ್ರದೇಶದ ಮಧ್ಯೆ ಅಸ್ತಿತ್ವದಲ್ಲಿದ್ದ ಜನಾಂಗದ ನಂಟು ಕಂಡು ಬಂದಿದೆ ಎಂದರು.
ಆನುವಂಶಿಕ ಮೂಲದ ಸಂಶೋಧನೆಯಿಂದ ಭಾರತೀಯರಲ್ಲಿ ಅಡಗಿರುವ ಅಪರೂಪದ ಕಾಯಿಲೆಗಳನ್ನು ಪತ್ತೆ ಹಚ್ಚಲು ಸಹಾಯವಾಗುತ್ತದೆ. ಇತ್ತೀಚೆಗೆ 2,700 ಭಾರತೀಯರ ಜೀನ್ ಮಾದರಿಗಳನ್ನು ಪರಿಶೀಲಿಸಿ ಕೈಗೊಂಡ ಸಂಶೋಧನೆಯ ಪ್ರಕಾರ ಆಧುನಿಕ ಭಾರತೀಯರು ಪ್ರಮುಖವಾಗಿ ಇರಾನಿನ ಪರ್ವತ ಪ್ರದೇಶದ ಪ್ರಾಚೀನ ಕೃಷಿಕರು, ಪ್ಯಾಂಟಿಕ್ ಕ್ಯಾಸ್ಪಿಯನ್ ಮೈದಾನ ಪ್ರದೇಶದ ಪಶುಪಾಲಕರು, ಅಂಡಮಾನ್ ದ್ವೀಪದ ಬೇಟೆಯಾಡುವ ಜನಾಂಗ ಆಗಿದೆ. ಆದರೆ ನಾವು ನಡೆಸಿದ ಸಂಶೋಧನೆಯ ಪ್ರಕಾರ ʼಪ್ರೊಟೋ- ದ್ರಾವಿಡಿಯನ್ʼ ಭಾರತೀಯರ ಮತ್ತೊಂದು ಪೂರ್ವಜರ ಮೂಲವಾಗಿದೆ. ಕೊರಗರ ಕುರಿತಂತೆ ನಡೆಸಿದ ಈ ಪ್ರಬಂಧವು European Journal of Human Genetics ನಲ್ಲಿ ಪ್ರಕಟಗೊಂಡಿದ್ದು, ಅಂತಾರಾಷ್ಟ್ರೀಯ ಮಾನ್ಯತೆ ಲಭಿಸಿದೆ ಎಂದು ಡಾ.ಎಂ.ಎಸ್.ಮುಸ್ತಾಕ್, ಡಾ. ರಣಜಿತ್ ದಾಸ್, ಡಾ. ಜೈಸನ್ ಸಿಕ್ವೇರಾ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ʼಪ್ರೊಟೋ-ದ್ರಾವಿಡ್ʼ ಮೂಲವು ಸಿಂಧೂ ನಾಗರಿಕತೆಯ ಕಾಲದಲ್ಲಿ ಉಗಮವಾಗಿದೆ. ಇತರ ಮೂಲ ಜನಾಂಗದಿಂದ ಇದು ವಿಭಿನ್ನವಾಗಿದೆ. ಈ ಜನಾಂಗವು ಸುಮಾರು 4,400 ವರ್ಷಗಳ ಹಿಂದೆ ಇರಾನ್ ಸಮತಟ್ಟಿನ ಪ್ರದೇಶ ಮತ್ತು ಸಿಂಧೂ ನದಿ ಪ್ರದೇಶದ ಮಧ್ಯೆ ಅಸ್ತಿತ್ವದಲ್ಲಿತ್ತು ಎಂದು ಭಾವಿಸಲಾಗಿದೆ. ದ್ರಾವಿಡ ಭಾಷಾ ಪ್ರದೇಶವು ಇಂಡೋ ಯುರೋಪಿಯನ್ ಭಾಷೆಗಳು ಭಾರತದಲ್ಲಿ ಹರಡುವ ಮುಂಚೆ ಅಸ್ತಿತ್ವದಲ್ಲಿತ್ತು ಎಂಬುದನ್ನು ಬೆಂಬಲಿಸುತ್ತದೆ ಎಂದು ಪ್ರತಿಪಾದಿಸಿದರು.
ಈ ಅಧ್ಯಯನಕ್ಕೆ ಯುನಿವರ್ಸಿಟಿ ಆಫ್ ಬರ್ನ್‌ನ ಭಾಷಾ ಶಾಸ್ತ್ರಜ್ಞ ಪ್ರೊ. ಜಾರ್ಜ್ ವ್ಯಾನ್ ಡ್ರಿಮ್ ಸಹಕರಿಸಿದ್ದಾರೆ. ಕೊರಗ ಸಮುದಾಯದ ಜನರಿಗೆ ಉತ್ತರ ದ್ರಾವಿಡ ಭಾಷಾ ಜನಾಂಗದೊಂದಿಗೆ ಮಾತೃ ಸಂಬಂಧ ಇದೆ ಎಂಬುದನ್ನು ಉಲ್ಲೇಖಿಸಲಾಗಿದೆ. ದ್ರಾವಿಡ ಭಾಷಾ ಜನಾಂಗವನ್ನು ಕೇಂದ್ರವಾಗಿಸಿಕೊಂಡು ನಡೆಸಲಾದ ಈ ಸಂಶೋಧನೆಯ ಪ್ರಕಾರ ಇರಾನ್ ಸಮತಟ್ಟಿನ ರೈತರ ಅನುವಂಶೀಯ ಮೂಲದಿಂದ ಬೇರ್ಪಟ್ಟ ಹೊಸತಾದ ನಾಲ್ಕನೆಯ ಮೂಲ ವಂಶ ಅಂದರೆ ಪ್ರೊಟೋ-ದ್ರಾವಿಡ್ ಭಾರತದಲ್ಲಿ ಉಗಮವಾಯಿತು. ಈ ವಿಚಾರವನ್ನು ಎಲಾಮೋ-ದ್ರಾವಿಡ ಸಿದ್ಧಾಂತ ಹಾಗೂ ದ್ರಾವಿಡ ಭಾಷೆಗಳ ಇತಿಹಾಸದ ಕಾಲಘಟ್ಟದ ಸಂಬಂಧಗಳು ಸರಿ ಹೊಂದಿಸುತ್ತದೆ ಎಂದು ಹೇಳಿದರು.
ಕೊರಗ, ಕುರುಖ್, ಬ್ರಾಹುಯಿ ಭಾಷೆಗಳ ನಡುವಿನ ಸಂಬಂಧವನ್ನು ಆಧಾರವಾಗಿರಿಸಿಕೊಂಡು ಅಧ್ಯಯನದ ಅನುವಂಶಿಕ ಮಾದರಿಯಾಗಿದೆ. ಅಂದರೆ ʼಪ್ರೊಟೋ-ದ್ರಾವಿಡ್ʼ ಮೂಲವಂಶವು ಇಂದಿನ ಬಹುತೇಕ ಭಾರತೀಯರಲ್ಲಿ ಕಂಡು ಬರುತ್ತದೆ. ಆದರೆ ಪ್ರಾಚೀನ ದಕ್ಷಿಣ ಭಾರತೀಯ ಮೂಲವಂಶ (Ancient Ancestral South Indian) ಹೊಂದಿರುವ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಇದು ಕಂಡು ಬರುವುದಿಲ್ಲ ಎಂದು ಡಾ. ಜೈಸನ್ ಸಿಕ್ವೇರಾ ಹೇಳಿದರು.
ವಂಶವಾಹಿ ಹಾಗೂ ಭಾಷಿಕ ಅಧ್ಯಯನವನ್ನು ಈ ಸಂಶೋಧನೆಯಲ್ಲಿ ಒಳಗೊಳಿಸಲಾಗಿದೆ. ಇದರಲ್ಲಿ ಪ್ರೊಟೋ-ದ್ರಾವಿಡಿಯನ್ ಮೂಲದ ಅಂಶಗಳು ಇತರ ಭಾರತೀಯರಲ್ಲಿ ಶೇ.20ರಷ್ಟಿದ್ದರೆ, ಕೊರಗರಲ್ಲಿ ಶೇ.30ರಷ್ಟು ಇದೆ ಎಂದು ಡಾ. ಜೈಸನ್ ಸಿಕ್ವೇರಾ ವಿವರಿಸಿದರು.
ಕೊರಗ ಸಮುದಾಯದಲ್ಲಿ ಕಂಡುಬರುವ ಜೀನ್ ಹ್ಯಾಪ್ಲೋಟೈಪ್ ಅಂತರ್‌ವಿವಾಹದ ಪರಿಣಾಮವಾಗಿರಬಹುದು. ಹಾಗೆ ಈ ಜನಾಂಗದ ಮೇಲೆ ನಡೆಸಿದ ಅಧ್ಯಯನವು ಅನೇಕ ಅನುವಂಶೀಯ ಕಾಯಿಲೆಗಳಿಗೆ ಕಾರಣವಾಗಬಹುದಾದ ಅನುವಂಶಿಕ ರೂಪಾಂತರವನ್ನು ಪತ್ತೆ ಹಚ್ಚಿದೆ. ಈ ಸಮುದಾಯದಲ್ಲಿ ಶಿಶು ಸಾವಿನ ಪ್ರಮಾಣ, ನರ ಸಂಬಂಧಿ ತೊಂದರೆಗಳು, ಕುರುಡತನ, ಬಂಜೆತನ ಕಂಡು ಬಂದಿದೆ. ಇವುಗಳು ಕೊರಗರ ಜೀವಿತಾವಧಿ ಕಡಿಮೆಯಾಗಲು ಕಾರಣವಾಗಿರಬಹುದು ಎಂದು ಡಾ. ರಣಜಿತ್ ದಾಸ್ ಹೇಳಿದರು.
ಮಂಗಳೂರು ವಿವಿ ಸಂಶೋಧನಾ ತಂಡವು ಜನಸಂಖ್ಯಾ ತಳಿಶಾಸ್ತ್ರದ ಅಧ್ಯಯನದಲ್ಲಿ ಸಕ್ರಿಯವಾಗಿದೆ. ಭಾರತೀಯ ದಕ್ಷಿಣ-ಪಶ್ಚಿಮ ಕರಾವಳಿಯ ಜನಾಂಗಗಳ ಅಧ್ಯಯನದಲ್ಲಿ ನಿರಂತರವಾಗಿ ತೊಡಗಿಕೊಂಡಿವೆ. ಕೊರಗ ಜನಾಂಗದ ವಂಶವಾಹಿ ಅಧ್ಯಯನವನ್ನು ಮಂಗಳೂರು ವಿವಿ ಹಾಗೂ ಯೆನಪೊಯ ವಿವಿ ಜಂಟಿ ಸಂಶೋಧನೆಯೊಂದಿಗೆ ಕೈಗೊಳ್ಳಲಾಗಿದೆ. ಅದರ ಫಲಿತಾಂಶ ಈ ವಿಚಾರವನ್ನು ಸ್ಪಷ್ಟಪಡಿಸಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್.ಧರ್ಮ ಹೇಳಿದರು.
ಕೊರಗರ ಜನಸಂಖ್ಯೆ ಇಳಿಮುಖವಾಗಿದೆ. 1991ರಲ್ಲಿ ಕೊರಗರ ಜನಸಂಖ್ಯೆ 17,000 ಇದ್ದುದು 2001ರಲ್ಲಿ 16,700ಕ್ಕೆ ಇಳಿಕೆಯಾಗಿದೆ. 2011ರಲ್ಲಿ 15,991ಕ್ಕೆ ಇಳಿದಿತ್ತು. ಈ ಇಳಿಕೆಗೆ ಮತ್ತಷ್ಟು ಅಧ್ಯಯನಗಳು ನಡೆಯಬೇಕಿದೆ ಎಂದು ಮಂಗಳೂರು ವಿವಿ ಸೋಶಿಯಲಾಜಿ ವಿಭಾಗದ ಉಪನ್ಯಾಸಕಿ ಡಾ. ಸಬಿತಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಮತ್ತಿತರರು ಉಪಸ್ಥಿತರಿದ್ದ್ದರು.




