ನವದೆಹಲಿ: ಕೋವಿಡ್ ಬಂದಾಗ ಅತ್ಯಂತ ದೊಡ್ಡ ಕುಸಿತ ಕಂಡ ಆರ್ಥಿಕತೆಗಳಲ್ಲಿ ಭಾರತವೂ ಒಂದು. ಆದರೆ, ಕೋವಿಡ್ ಬಳಿಕ ಅತಿ ವೇಗವಾಗಿ ತಿರುಗಿ ನಿಂತ ಆರ್ಥಿಕತೆ (GDP) ಎಂದರೆ ಭಾರತವೇ ಎಂದು ಅನೇಕ ಆರ್ಥಿಕ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಹಾರ್ವರ್ಡ್ ಯೂನಿವರ್ಸಿಟಿಯ ಆರ್ಥಿಕ ತಜ್ಞರಾದ ಜೇಸನ್ ಫರ್ಮನ್ ಅವರು ಪ್ರಮುಖ ಆರ್ಥಿಕತೆಗಳ ಬೆಳವಣಿಗೆಯ ಚಿತ್ರಣವನ್ನು ಗ್ರಾಫಿಕ್ಸ್ ರೂಪದಲ್ಲಿ ತೆರೆದಿಟ್ಟಿದ್ದಾರೆ.
ಹಾರ್ವರ್ಡ್ ಪ್ರೊಫೆಸರ್ ತಮ್ಮ ಎಕ್ಸ್ ಅಕೌಂಟ್ನಲ್ಲಿ ಪ್ರಸ್ತುತಪಡಿಸಿರುವ ಗ್ರೋತ್ ಚಾರ್ಟ್ ನಿಜಕ್ಕೂ ಕುತೂಹಲ ಕೆರಳಿಸುವಂತಿದೆ. ಕೋವಿಡ್ ಪೂರ್ವದಿಂದ ಭಾರತ, ರಷ್ಯಾ, ಚೀನಾ, ಯೂರೋಪ್ ಮತ್ತು ಅಮೆರಿಕ ದೇಶಗಳ ಆರ್ಥಿಕ ಬೆಳವಣಿಗೆ ಹೇಗೆ ಸಾಗಿದೆ ಎಂಬುದನ್ನು ಈ ಗ್ರಾಫಿಕ್ಸ್ ಕಣ್ಣಿಗೆ ಕಟ್ಟುವಂತೆ ವ್ಯಕ್ತಪಡಿಸುತ್ತದೆ.
ಭಾರತ ಬಿಟ್ಟು ಉಳಿದ ಈ ಪ್ರಮುಖ ಆರ್ಥಿಕತೆಗಳು ಕೋವಿಡ್ ಪೂರ್ವದ ಮಟ್ಟವನ್ನು ದಾಟಲು ತೊಡರಾಡುತ್ತಿವೆ. ಆಧರೆ, ಭಾರತ ಮಾತ್ರ ಅಮೋಘವಾಗಿ ಮತ್ತು ಸ್ಥಿರವಾಗಿ ಬೆಳೆಯುತ್ತಿರುವುದನ್ನು ಇದು ತೋರಿಸುತ್ತದೆ.
ಕುತೂಹಲ ಎಂದರೆ, ಈ ಐದು ದೊಡ್ಡ ಆರ್ಥಿಕತೆಗಳ ಪೈಕಿ ಕೋವಿಡ್ ಸಾಂಕ್ರಾಮಿಕ ಕಾಲಘಟ್ಟವಾದ 2020ರಲ್ಲಿ ಭಾರತವೇ ಅತಿಹೆಚ್ಚು ಆರ್ಥಿಕ ಕುಸಿತ ಕಂಡಿದ್ದು. 2022ರ ನಂತರ ಭಾರತವು ಎಲ್ಲರನ್ನೂ ಮೀರಿಸಿ ಬೆಳೆಯುತ್ತಿದೆ. 2024ರಲ್ಲಿ ಕೋವಿಡ್ ಮಟ್ಟಕ್ಕಿಂತ ಶೇ. 3ರಷ್ಟು ಮೇಲೆ ಹೋಗಿದೆ. 2025ರ ಮೂರನೇ ಕ್ವಾರ್ಟರ್ ಅಂತ್ಯವಾದ ಸೆಪ್ಟೆಂಬರ್ನಲ್ಲಿ ರಿಯಲ್ ಜಿಡಿಪಿ ದರ ಕೋವಿಡ್ ಮಟ್ಟಕ್ಕಿಂತ ಶೇ. 5ರಷ್ಟು ಮೇಲಿತ್ತು.
ಜೇಸನ್ ಫರ್ಮನ್ ಅವರು ಭಾರತದ ಮುಂದಿನ ಆರ್ಥಿಕತೆಯ ಹಾದಿ ಇದೇ ರೀತಿ ಸುಗಮವಾಗಿರುತ್ತದೆ ಎಂದು ನಿರೀಕ್ಷಿಸಿದ್ದಾರೆ. ಹಲವು ಏಜೆನ್ಸಿಗಳೂ ಕೂಡ ಇದೇ ಬೆಳವಣಿಗೆಯನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಮೂಡೀಸ್, ಐಸಿಆರ್ಎ ಮೊದಲಾದ ಅಂತಾರಾಷ್ಟ್ರೀಯ ಏಜೆನ್ಸಿಗಳು ಭಾರತದ ಜಿಡಿಪಿ ದರ ಶೇ. 7 ಅನ್ನು ದಾಟಬಹುದು ಎಂದು ಅಂದಾಜು ಮಾಡಿವೆ. ಆರ್ಬಿಐ ಮೊದಲಾದ ಸಂಸ್ಥೆಗಳು ಕೂಡ ಶೇ. 7ರ ಆಸುಪಾಸಿನ ಬೆಳವಣಿಗೆಯನ್ನು ನಿರೀಕ್ಷಿಸಿವೆ.




