ಕಾಸರಗೋಡು: ಶ್ರೀಲಂಕಾದ ತೆಂಗಿನ ಸಂಶೋಧನಾ ಸಂಸ್ಥೆ (ಸಿಆರ್‍ಐ)ಯ ನಿಯೋಗ ಕಾಸರಗೋಡಿನ ಐಸಿಎಆರ್-ಕೇಂದ್ರ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್‍ಸ್ಟಿಟ್ಯೂಟ್‍ಗೆ (ಸಿಪಿಸಿಆರ್‍ಐ) ಭೇಟಿ ನೀಡಿತು.
ತೆಂಗು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ದ್ವಿಪಕ್ಷೀಯ ಸಹಕಾರ ಮತ್ತು ವಿನಿಮಯ ಪರಿಣತಿಯನ್ನು ಬಲಪಡಿಸುವ ಅಂಗವಾಗಿ ಭೇಟಿ ಆಯೋಜಿಸಲಾಗಿತ್ತು. ಈ ಸಂದರ್ಭ ಸಿಪಿಸಿಆರ್‍ಐ ವಿಜ್ಞಾನಿಗಳೊಂದಿಗೆ ಸಂವಾದಾತ್ಮಕ ಸಭೆಯನ್ನು ನಿಯೋಗ ಸದಸ್ಯರು ನಡೆಸಿದರು. ಸಿಪಿಸಿಆರ್‍ಐ ನಿರ್ದೇಶಕ ಡಾ. ಬಾಲಚಂದ್ರ ಹೆಬ್ಬಾರ್ ತೆಂಗಿನ ಕ್ಷೇತ್ರದಲ್ಲಿ ಸಿಪಿಸಿಆರ್‍ಐನ ಮಹತ್ವದ ಸಾಧನೆಗಳ ಅವಲೋಕನ ನಡೆಸಿ ಸಮಗ್ರ ಮಾಹಿತಿಯಿತ್ತರು. ಶ್ರೀಲಂಕಾದ ತೆಂಗು ಸಂಶೋಧನಾ ಸಂಸ್ಥೆ (ಸಿಆರ್‍ಐ) ಪ್ರತಿನಿಧಿಗಳಾದ ಹೆಚ್ಚುವರಿ ನಿರ್ದೇಶಕಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ನಯನಿ ಸಮಂತಾ ಅರಚಿಗೆ, ತಂತ್ರಜ್ಞಾನ ವರ್ಗಾವಣೆ ವಿಭಾಗದ ಮುಖ್ಯಸ್ಥ ಚಾಮಿಂದಾ ಶಾಮನ್ ಹೆರಾತ್, ಹಿರಿಯ ಸಂಶೋಧನಾ ಅಧಿಕಾರಿಗಳಾದ ಡಾ. ಮುಹಮ್ಮದ್ ಖಾಲಿದ್ ಫಾತಿಮಾ ನಧೀಶ, ಡಾ. ಅಟಪಟ್ಟು ಅರಚಿಲಗೆ ಅಂಜನಾ ಜಯಸಂಕ ಅಟಪಟ್ಟು, ಸಂಶೋಧನಾ ಅಧಿಕಾರಿ ಡಾ. ಪಾಸ್ಕುವಲ್ ಹಂಡಿ ಪ್ರಸಾದ್ ರೋಷನಿ ಡಿ ಸಿಲ್ವಾ ಸಂವಾದದಲ್ಲಿ ಪಲ್ಗೊಂಡು ತೆಂಗು ಕೃಷಿಯ ಬಗೆಗಿನ ಪ್ರಮುಖ ಸವಾಲುಗಳನ್ನು ಚರ್ಚಿಸುವುದರ ಜತೆಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ನಿಯೋಗವು ಸಿಪಿಸಿಆರ್‍ಐ ಪ್ರಾಯೋಗಿಕ ಕೃಷಿ ಮತ್ತು ಸೌಲಭ್ಯಗಳು ಮತ್ತು ಪ್ರಯೋಗಾಲಯಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಕ್ಷೇತ್ರ ಮಟ್ಟದ ಅನುಷ್ಠಾನಗಳನ್ನು ವೀಕ್ಷಿಸಲು ನಿಯೋಗವು ಕಾಸರಗೋಡು ಜಿಲ್ಲೆಯ ಆಯ್ದ ರೈತರ ಹೊಲಗಳಿಗೆ ಭೇಟಿ ನೀಡಿತು. ಐಸಿಎಆರ್-ಸಿಪಿಸಿಆರ್‍ಐನ ಬೆಳೆ ಸುಧಾರಣಾ ವಿಭಾಗದ ಮುಖ್ಯಸ್ಥೆ ಡಾ. ವಿ. ನಿರಾಲ್ ಪ್ರತಿನಿಧಿಗಳನ್ನು ಸ್ವಾಗತಿಸಿದರು. ಮಾಜ ವಿಜ್ಞಾನ ಮುಖ್ಯಸ್ಥ ಡಾ. ಕೆ. ಪೆÇನ್ನುಸ್ವಾಮಿ ವಂದಿಸಿದರು.





