ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳಲ್ಲಿ ತ್ರಿಸ್ತರ ಪಂಚಾಯಿತಿಗಳ ಅಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ಪ್ರಕಟಿಸಲಾಯಿತು. ಈ ಸಂಬಂಧ ರಾಜ್ಯ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದೆ. ಕಾಸರಗೋಡು ಜಿಲ್ಲೆಯ ಆರು ಬ್ಲಾಕ್ ಪಂಚಾಯಿತಿಗಳಲ್ಲಿ ಎರಡು ಬ್ಲಾಕ್ ಪಂಚಾಯತ್‍ಗಳು ಮಹಿಳೆಯರಿಗೆ ಹಾಗೂ ಒಂದು ಬ್ಲಾಕ್ ಪರಿಶಿಷ್ಟ ಪಂಗಡದ ಮಹಿಳೆಗೆ ಸ್ಥಾನ ಮೀಸಲಿರಿಸಲಾಗಿದೆ. ಪರಪ್ಪ ಪರಿಶಿಷ್ಟ ಪಂಗಡದ ಮಹಿಳಾ ಮೀಸಲಾತಿ ಬ್ಲಾಕ್ ಆಗಿದ್ದರೆ, ಕಾಞಂಗಾಡ್ ಮತ್ತು ನೀಲೇಶ್ವರ ಪಂಚಾಯಿತಿಗಳನ್ನು ಮಹಿಳಾ ಮೀಸಲಾತಿ ಬ್ಲಾಕ್ ಪಂಚಾಯತ್‍ಗಳಾಗಿ ನಿಗದಿಪಡಿಸಲಾಗಿದೆ.
ಕಾಸರಗೋಡು ಜಿಲ್ಲೆಯ ಮೂರು ನಗರಸಭೆಗಳಲ್ಲಿ ಕಾಸರಗೋಡು ನಗರಸಭೆಯಲ್ಲಿ ಮಹಿಳಾ ಮೀಸಲಾತಿ ಕಲ್ಪಿಸಲಾಘಿದೆ. ಕಾಸರಗೋಡು ಜಿಲ್ಲೆಯ 38 ಗ್ರಾಮ ಪಂಚಾಯಿತಿಗಳಲ್ಲಿ 21 ಗ್ರಾಮ ಪಂಚಾಯಿತಿಗಳಲ್ಲಿ ಮೀಸಲಾತಿ ಜಾರಿಗೆ ತರಲಾಗಿದೆ. 17 ಮಹಿಳಾ ಮೀಸಲಾತಿ ಪಂಚಾಯಿತಿಗಳು, ಒಂದು ಪರಿಶಿಷ್ಟ ಜಾತಿ ಮೀಸಲಾತಿ ಪಂಚಾಯಿತಿ ಮತ್ತು ಒಂದು ಪರಿಶಿಷ್ಟ ಪಂಗಡ ಮೀಸಲಾತಿ ಪಂಚಾಯಿತಿಯಾಗಿ ಗೊತ್ತುಪಡಿಸಲಾಯಿತು.
ಬೆಳ್ಳೂರು ಗ್ರಾಮ ಪಂಚಾಯಿತಿಯನ್ನು ಪರಿಶಿಷ್ಟ ಜಾತಿ ಮಹಿಳಾ ಮೀಸಲಾತಿ ಗ್ರಾಮ ಪಂಚಾಯಿತಿ ಆಗಿ ಘೋಷಿಸಲಾಗಿದೆ. ಚೆಂಗಳ ಪರಿಶಿಷ್ಟ ಜಾತಿ ಮೀಸಲಾತಿ ಗ್ರಾಮ ಪಂಚಾಯಿತಿ, ಕಲ್ಲಾರ್ ಪರಿಶಿಷ್ಟ ಪಂಗಡಗಳ ಮಹಿಳಾ ಮೀಸಲಾತಿ ಗ್ರಾಮ ಪಂಚಾಯಿತಿ ಮತ್ತು ಕಿನಾನೂರು ಕರಿಂದಲಂ ಪರಿಶಿಷ್ಟ ಪಂಗಡಗಳ ಮೀಸಲಾತಿ ಗ್ರಾಮ ಪಂಚಾಯಿತಿ ಎಂದು ನಿರ್ಧರಿಸಲಾಯಿತು.
ಕುಂಬ್ಡಾಜೆ, ಕಾರಡ್ಕ, ಕುತ್ತಿಕ್ಕೋಲ್, ಪೈವಳಿಗೆ, ಪುತ್ತಿಗೆ, ಎಣ್ಮಕಜೆ, ಮಧೂರು, ಚೆಮ್ನಾಡು, ಪಳ್ಳಿಕ್ಕೆರೆ, ಅಜಾನೂರು, ಪುಲ್ಲೂರು ಪೆರಿಯ, ಬಳಾಲ್, ಈಸ್ಟ್ ಎಳೇರಿ, ಕಯ್ಯೂರು ಚೀಮೇನಿ, ವಲಿಯಪರಂಬ, ಪಡನ್ನ ಮತ್ತು ತ್ರಿಕರಿಪುರ ಗ್ರಾಮ ಪಂಚಾಯಿತಿಗಳನ್ನು ಮಹಿಳಾ ಮೀಸಲಾಯಿ ಪಂಚಾಐಇತಿಗಳಾಗಿ ಅಧಿಸೂಚನೆ ಹೊರಡಿಸಲಾಗಿದೆ.




