ಬದಿಯಡ್ಕ: ಋಗ್ವೇದದ ಕೊನೆಯ ಸೂಕ್ತ ನಮಗೆಲ್ಲ ಸಮಾನತೆಯ ಬಗ್ಗೆ ಅರಿವನ್ನು ಮೂಡಿಸುತ್ತದೆ. ಈ ಸೂಕ್ತದ ಕೊನೆಯ ಭಾಗದಲ್ಲಿ ಸಮಾನತೆಯನ್ನೂ ಮೀರಿ, ಸಹ ಚಿತ್ತಾಮೆಷಾಂ ಅಂತ ಕೂಡ ಬೋಧಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ರಾಷ್ಟ್ರೀಯ ಕಾರ್ಯಕರ್ತ ಸುಬ್ರಹ್ಮಣ್ಯ ಭಟ್ ಕಜಂಪಾಡಿ ಹೇಳಿದರು.
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಬುಧವಾರ ಕಾರ್ತಿಕ ಹುಣ್ಣಿಮೆಯ ಶುಭ ಸಂದರ್ಭ ಕರಾಡ ಸಹಾಯಕ ಬಂಧು ಚಾರಿಟೇಬಲ್ ಟ್ರಸ್ಟನ್ನು ಔಪಚಾರಿಕವಾಗಿ ಉದ್ಘಾಟಿಸಿ ಅವರು ಮಾತನಾಡಿದರು.
ಸೇವಾ ಕೈಂಕರ್ಯದಲ್ಲಿ ಸಮಾನತೆ ಮತ್ತು ಸಹ ಚಿತ್ತದ ಆವಶ್ಯಕತೆಯನ್ನು ಅವರು ತಿಳಿಸಿದರು. ಕರಾಡ ಸಹಾಯಕ ಬಂಧು ಚಾರಿಟೇಬಲ್ ಟ್ರಸ್ಟ್ ಮುಂದಕ್ಕೆ ಉತ್ತಮ ಸೇವಾ ಕಾರ್ಯಗಳನ್ನು ಮಾಡಿ ಉನ್ನತ ಮಟ್ಟಕ್ಕೆ ತಲುಪಲಿ. ಸಮಾಜಕ್ಕೆ ಅನುಕರಣೀಯವಾಗಿರಲೆಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಕರಾಡ ಸಹಾಯ ಬಂಧು ಚಾರಿಟೇಬಲ್ ಟ್ರಸ್ಟ್‍ನ ಜನಪರ ಕಾರ್ಯಕ್ರಮದ ಭಾಗವಾಗಿ ಹೊಸದಾದ ಆಂಬುಲೆನ್ಸ್‍ನ್ನು ಕಾಸರಗೋಡಿನ ಹಿರಿಯ ಮೂಳೆ ತಜ್ಞ ಡಾ. ಅನಂತಪದ್ಮನಾಭ ಭಟ್ ಅವರು ಲೋಕಾರ್ಪಣೆಗೈದು, ಸಮಾಜದ ಅಶಕ್ತರಿಗೆ ಆರೋಗ್ಯ ಸೇವೆಯ ಅಗತ್ಯತೆಯ ಬಗ್ಗೆ ತಿಳಿಸಿದರು. ಸೇವಾ ಕಾರ್ಯಕ್ರಮಗಳು ಟ್ರಸ್ಟ್‍ನ ವತಿಯಿಂದ ನಿರಂತರ ನಡೆಯಲಿ ಎಂದರು. ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಹಿರಿಯರಾದ ಉಪ್ಪಂಗಳ ವಾಸುದೇವ ಭಟ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮೊಕ್ತೇಸರ ವಿಶ್ವನಾಥ ಭಟ್ ಬೇಂದ್ರೋಡು ಮಾತನಾಡಿದರು. ಜಯಲಕ್ಷ್ಮಿ ಆನೆಮಜಲು ಪ್ರಾರ್ಥನೆಗೈದರು. ಕೃಷ್ಣಮೂರ್ತಿ ಎಡೆಪ್ಪಾಡಿ ಅವರು, ಈಗ ಅಧಿಕೃತವಾಗಿ ಟ್ರಸ್ಟ್ ಆಗಿ ದಾಖಲಾತಿಗೊಂಡಿರುವ ಕರಾಡ ಸಹಾಯಕ ಬಂಧು 2021 ಜುಲೈಯಿಂದ ಪ್ರಾರಂಭಗೊಂಡು ಇಂದಿನವರೆಗೆ ಅಶಕ್ತರಿಗೆ ನೀಡಿರುವ ಸೇವಾ ಕಾರ್ಯಗಳ ಬಗ್ಗೆ ಮತ್ತು ಕರಾಡ ಸಹಾಯಕ ಬಂಧು ವೈದ್ಯಕೀಯ ಉಪಕರಣ ಭಂಡಾರದ ಬಗ್ಗೆ, ಕರಾಡ ರಕ್ತನಿಧಿ,ವಿದ್ಯಾನಿಯ ಬಗ್ಗೆ, ರಾಷ್ಟ್ರ ಸೇವೆ, ಪರಿಸರ ಸಂರಕ್ಷಣಾ ಕಾರ್ಯಕ್ರಮಗಳ ಬಗ್ಗೆ, ಮುಳ್ಳೇರಿಯಾ ಸಹಕಾರಿ ಆಸ್ಪತ್ರೆಲ್ಲಿ ನೀಡಿರುವ 2 ಡಯಾಲಿಸಿಸ್ ಯಂತ್ರಗಳ ಬಗ್ಗೆ ನೆರೆದವರಿಗೆ ಸ್ಥೂಲ ಚಿತ್ರಣವನ್ನು ನೀಡಿದರು. ಪುರುಷೋತ್ತಮ ಪ್ರಸಾದ್ ಪಾರ್ಥಕೊಚ್ಚಿ ವಂದಿಸಿದರು. ಕರಾಡ ಸಹಾಯಕ ಬಂಧು ಆಂಬುಲೆನ್ಸ್ ಸಾರ್ವಜನಿಕ ಸೇವೆಗೆ ಲಭ್ಯ ಎಂದು ಸಂಘಟಕರು ತಿಳಿಸಿದರು.




.jpg)
