ತಿರುವನಂತಪುರಂ: ದಿತ್ವಾ ಚಂಡಮಾರುತದಿಂದ ಕೊಲಂಬೊ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಭಾರತೀಯರಿಗೆ ಎಲ್ಲ ಅಗತ್ಯ ನೆರವು ನೀಡಲು ಕೇರಳ ರಾಜ್ಯ ಸಿದ್ಧ ಎಂದು ಶನಿವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಂಡಮಾರುತದಿಂದ ಗಂಭೀರ ಸ್ವರೂಪದ ಅಡಚಣೆಯುಂಟಾಗಿರುವುದರಿಂದ, ಅಲ್ಲಿ ಸುಮಾರು 300 ಮಂದಿ ಭಾರತೀಯ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಅವರಲ್ಲಿ ಬಹುತೇಕರು ಕೇರಳ ರಾಜ್ಯದವರಾಗಿದ್ದಾರೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲಿ ಭಾರತೀಯರು ಪ್ರಯಾಣಿಕರು ಕಳೆದ ಮೂರು ದಿನಗಳಿಂದ ಸೂಕ್ತ ಆಹಾರ, ನೀರು ಹಾಗೂ ಮೂಲಭೂತ ಸೌಕರ್ಯಗಳಿಲ್ಲದೆ ಸಿಲುಕಿಕೊಂಡಿದ್ದಾರೆ. ಬಹುತೇಕ ಪ್ರಯಾಣಿಕರು ಕೊಲಂಬೊವನ್ನು ಮಧ್ಯಂತರ ನಿಲ್ದಾಣವನ್ನಾಗಿ ಬಳಸುತ್ತಿದ್ದಾರೆ. ಸಧ್ಯ ಅವರು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದಾರೆ.
"ಕೊಲಂಬೊ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರ ಸ್ಥಿತಿಯ ಬಗ್ಗೆ ನಾವು ತುಂಬಾ ಕಳವಳಗೊಂಡಿದ್ದೇವೆ. ಅವರಿಗೆಲ್ಲ ಅಗತ್ಯ ನೆರವು ಒದಗಿಸಲು ಕೇರಳ ಸರಕಾರ ಸನ್ನದ್ಧವಾಗಿದೆ" ಎಂದು ಪಿಣರಾಯ್ ವಿಜಯನ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.




