ಕಾಸರಗೋಡು: ಜಿಲ್ಲೆಯ ವಿವಿಧೆಡೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾರಕ ಹೈಬ್ರಿಡ್ ಗಾಂಜಾ ಹಾಗೂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ವಿದ್ಯಾನಗರ ಠಾಣೆ ಮತ್ತು ಎಎಸ್‍ಪಿ ಮೇಲ್ನೋಟದಲ್ಲಿ ಕಾರ್ಯಚರಿಸುವ ಮಾದಕ ದ್ರವ್ಯ ವಿರುದ್ಧ ಸ್ಕ್ವೇಡ್ ಕಾರ್ಯಾಚರಣೆ ನಡೆಸಿದೆ.
ಉಳಿಯತ್ತಡ್ಕದ ಇಜ್ಜತ್‍ನಗರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 6ಗ್ರಾಂ ಎಂಡಿಎಂಎ ಮತ್ತು ಹೈಬ್ರಿಡ್ ಗಾಂಜಾ ವಶಪಡಿಸಿಕೊಂಡು, ಉಳಿಯತ್ತಡ್ಕ ನಿವಾಸಿ ಹನೀಫಾ ಎಂಬಾತನನ್ನು ಬಂಧಿಸಿದ್ದಾರೆ.
ಹೊಸದುರ್ಗ ಠಾಣೆ ಪೊಲೀಸರು ಮುರಿಯನಾವಿಲ್‍ನಲ್ಲಿ ಶಾಜಹಾನ್ ಎಂಬಾತನ ಮನೆಗೆ ದಾಳಿ ನಡೆಸಿದ ಸ್ನಾನದ ಮನೆಯಲ್ಲಿ ಅವಿತಿರಿಸಲಾಗಿದ್ದ ಮೂರು ಗ್ರಾಂ ಎಂಡಿಎಂಎ ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಬೇಕಲ ಠಾಣೆ ಪೊಲೀಸರು ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯ ಸನಿಹದ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುವ ಸಂದರ್ಭ ಎಂಡಿಎಂಎ ಸಾಗಿಸುತ್ತಿದ್ದ ಪಯ್ಯನ್ನೂರು ರಾಮಂತಳಿ ಕುನ್ನಾರ ನಿವಾಸಿಗಳಾದ ಎಂ.ಪ್ರಜೀತ್ ಹಾಗೂ ಟಿ. ಸಜಿತ್ ಎಂಬವರನ್ನು ಬಂಧಿಸಿದ್ದಾರೆ. ಇವರಿಂದ 1.95ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಸ್ಥಳೀಯಡಳಿತ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಮಾದಕವಸ್ತು ಸಾಗಾಟದ ಬಗ್ಗೆ ಪೊಲೀಸರು ಹಾಗೂ ಅಬಕಾರಿ ದಳ ಕಾರ್ಯಾಚರಣೆ ಚುರುಕುಗೊಳಿಸಿದೆ.




