ಉಪ್ಪಳ: ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ 'ಸಾಹಿತ್ಯ ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ' ಎಂಬ ಕಾರ್ಯಕ್ರಮದ ಅಂಗವಾಗಿ ಹಿರಿಯ ವೈದ್ಯ ಕಯ್ಯಾರು ಪ್ರಭಾಕರ ಹೊಳ್ಳ ಮತ್ತು ಡಾ. ಸುಮತಿ ಹೊಳ್ಳ ದಂಪತಿಯರನ್ನು ಉಪ್ಪಳ ಕೆ.ಎನ್.ಎಚ್ ಆಸ್ಪತ್ರೆಯ ಬಳಿಯಲ್ಲಿರುವ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ಡಾ.ಕೆ.ಪಿ ಹೊಳ್ಳ ದಂಪತಿಯರನ್ನು ಶಾಲು ಹೊದೆಸಿ ಅಭಿನಂದಿಸಿದರು.
ಸಾಮಾಜಿಕ ಮುಖಂಡ ಅಶೋಕ ಕುಮಾರ್ ಹೊಳ್ಳ ಅಭಿನಂದನಾ ಭಾಷಣ ಮಾಡಿದರು. ಡಾ.ಕೆ.ಪಿ. ಹೊಳ್ಳ ಅವರು ಭಾರತೀಯ ಸೇನೆಯಲ್ಲಿ ಹುದ್ದೆಯಲ್ಲಿದ್ದು, ಬಳಿಕ ಹುಟ್ಟಿದೂರಿಗೆ ಸಮೀಪದ, ವೈದ್ಯಕೀಯ ಸೌಲಭ್ಯಗಳಿರದ ಉಪ್ಪಳದಲ್ಲಿ ತಂದೆಯ ಹೆಸರಿನಲ್ಲಿ ಕಯ್ಯಾರು ನಾರಾಯಣ ಹೊಳ್ಳ (ಕೆ.ಎನ್.ಎಚ್)ಆಸ್ಪತ್ರೆಯನ್ನು ಸ್ಥಾಪಿಸಿ ಬಡವರೂ ಸೇರಿದಂತೆ ಎಲ್ಲರಿಗೂ ಮಿತದರದಲ್ಲಿ ಉತ್ತಮ ವೈದ್ಯಕೀಯ ಸೇವೆಯನ್ನು ಲಭ್ಯಗೊಳಿಸಿದವರು. ಮಾತ್ರವಲ್ಲದೆ ಸಮಾಜಸೇವೆ ಮತ್ತು ಧಾರ್ಮಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡವರು ಎಂದು ಅಶೋಕ್ ಕುಮಾರ್ ಹೊಳ್ಳ ಹೇಳಿದರು.
ಮೀಯಪದವು ವಿದ್ಯಾವರ್ಧಕ ಎ.ಯು.ಪಿ ಶಾಲಾ ಪ್ರಬಂಧಕ ಶ್ರೀಧರ ರಾವ್, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಟಿ.ಡಿ.ಸದಾಶಿವ ರಾವ್ ಅವರು ಡಾ. ಕೆ.ಪಿ ಹೊಳ್ಳರ ವ್ಯಕ್ತಿತ್ವ ಮತ್ತು ಸಮಾಜಸೇವೆಯ ಕುರಿತು ಮಾತನಾಡಿದರು.
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ.ಪಿ.ಎನ್. ಮೂಡಿತ್ತಾಯ, ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರ ನಾರಾಯಣ ಭಟ್, ಪತ್ರಕರ್ತ ಜೆ.ಡಿ ಕಯ್ಯಾರು, ವೆಂಕಟ್ರಮಣ ಮೂಡಿತ್ತಾಯ, ಧನಲಕ್ಷ್ಮಿ ಉಪಸ್ಥಿತರಿದ್ದರು. ಡಾ.ಕೆ.ಪಿ. ಹೊಳ್ಳ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಾಜಾರಾಮ ರಾವ್ ವಂದಿಸಿದರು.




.jpg)
