ಕುಂಬಳೆ: ಕುಂಬಳೆ ಪಂಚಾಯಿತಿ ಅಧೀನದಲ್ಲಿರುವ ಪರಿಶಿಷ್ಟಜಾತಿ ಸಮುದಾಯಕ್ಕೆ ಸೇರಿದ ಕಿದೂರು ಕುಂಟಂಗೇರಡ್ಕದ ಸ್ಮಶಾನ ವಠಾರದಿಂದ ಸುಮಾರು ಎರಡು ಲಕ್ಷ ರೂ. ಮೊತ್ತದ ಮರ ಕಡಿದು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಗ್ರಾಮ ಪಂಚಾಯಿತಿ ಸದಸ್ಯ, ಕಾಂಗ್ರೆಸ್ ಮುಖಂಡ ರವಿರಾಜ್ ಯಾನೆ ತುಮ್ಮ ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜಾಮೀನಿನ ಮೂಲಕ ಹೊರಬಂದಿದ್ದಾರೆ.
ನ. 6ಹಾಗೂ 7ರ ಕಾಲಾವಧಿಯಲ್ಲಿ ಸ್ಮಶಾನ ವ್ಯಾಪ್ತಿಯಿಂದ ನೂರಕ್ಕೂ ಮಿಕ್ಕಿ ಮರಗಳನ್ನು ಕಡಿದು ಸಾಗಿಸಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೆಲವೊಂದು ರಾಜಕೀಯ ಪಕ್ಷಗಳು ರಂಗಕ್ಕಿಳಿದಿತ್ತು. ಮರಕಡಿದು ಸಗಿಸದ ಪ್ರಕರಣ ವಿವಾದಕ್ಕೆಡೆಯಾಗುತ್ತಿದ್ದಂತೆ ಪಂಚಾಯಿತಿ ಕಾರ್ಯದರ್ಶಿ ಕುಂಬಳೆ ಠಾಣೆಗೆ ದೂರು ನೀಡಿದ್ದರು. ರವಿರಾಜ್ ಅವ ರು ಪಂಚಾಯಿತಿಯ ಎಂಟನೇ ಮಡ್ವ ವಾರ್ಡಿನ ಸದಸ್ಯರಾಗಿದ್ದಾರೆ.




