ವಾರಾಣಸಿ: ಆಕಾಸ ಏರ್ ಸಂಸ್ಥೆಯ ವಿಮಾನವು ಟೇಕ್ ಆಫ್ ಆಗುವ ಕೆಲವೇ ಕ್ಷಣಗಳ ಮುನ್ನ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದ ಆರೋಪದ ಮೇಲೆ ಪ್ರಯಾಣಿಕರೊಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳುತ್ತಿದ್ದ ಕ್ಯೂಪಿ-1497 ಸಂಖ್ಯೆಯ ವಿಮಾನದಲ್ಲಿ ಸೋಮವಾರ ಘಟನೆ ನಡೆದಿದೆ.
ವಿಮಾನವು ರನ್‌ವೇನತ್ತ ಸಾಗುತ್ತಿದ್ದಾಗ ಜೌನಪುರ ಜಿಲ್ಲೆಯ ನಿವಾಸಿ ಸುಜಿತ್ ಸಿಂಗ್ ಎಂಬುವವರು ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದರು. ಕ್ಯಾಬಿನ್ ಸಿಬ್ಬಂದಿ ವಿಷಯವನ್ನು ಪೈಲಟ್‌ಗೆ ತಿಳಿಸಿದರು. ಕೂಡಲೇ ಅವರು ವಾಯು ಸಂಚಾರ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು. ನಂತರ ವಿಮಾನವನ್ನು ಪುನಃ ಪಾರ್ಕಿಂಗ್ ಸ್ಥಳಕ್ಕೆ ತಂದು ನಿಲ್ಲಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಭದ್ರತಾ ಸಿಬ್ಬಂದಿ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗೆ ಇಳಿಸಿದರು. ಬಳಿಕ ಸುಜಿತ್ ಸಿಂಗ್ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಮಾಹಿತಿ ನೀಡಿದರು.
'ಕುತೂಹಲದಿಂದ ದ್ವಾರ ತೆರೆಯಲು ಯತ್ನಿಸಿದೆ' ಎಂದು ಸುಜಿತ್ ತಿಳಿಸಿದ್ದಾರೆ ಎಂದು ಠಾಣಾಧಿಕಾರಿ ಪ್ರವೀಣ್ ಕುಮಾರ್ ಸಿಂಗ್ ತಿಳಿಸಿದರು.
ಭದ್ರತಾ ತಪಾಸಣೆ ಬಳಿಕ ವಿಮಾನವು ರಾತ್ರಿ 7.45ಕ್ಕೆ ಮುಂಬೈಗೆ ಬಂದಿಳಿಯಿತು.




