ಕಾಸರಗೋಡು: ಪರಪ್ಪ ಬ್ಲಾಕ್ ಪಂಚಾಯಿತಿಯ ಆಸ್ಪಿರೇಷನಲ್ ಬ್ಲಾಕ್ ಕಾರ್ಯಕ್ರಮದ ಅಂಗವಾಗಿ ರೈತರಿಗೆ ತಮ್ಮ ಕೃಷಿಭೂಮಿಯ ಮಣ್ಣಿನ ತಪಾಸಣೆ ನಡೆಸಿ ಆರೋಗ್ಯ ಕಾರ್ಡ್‍ಗಳ ವಿತರಣಾ ಕಾರ್ಯ ಬ್ಲಾಕ್ ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು. ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ ಲಕ್ಷ್ಮಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ರೈತರು ತಮ್ಮ ಕೃಷಿಭೂಮಿಯಲ್ಲಿ ಸೂಕ್ತ ರೀತಿಯಲ್ಲಿ ಕೃಷಿ ಮಾಡಲು ಸಹಾಯ ಮಾಡುವ ಗುರಿಯನ್ನು ಯೋಜನೆ ಹೊಂದಿದೆ ಮತ್ತು ಈ ಮೂಲಕ ಉತ್ಪಾದನೆಯನ್ನು ಹೆಚ್ಚಿಸಿ ಆರ್ಥಿಕ ಸಮೃದ್ಧಿಯನ್ನು ಸಾಧಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ 500 ಮಂದಿ ಕೃಷಿಕರಿಗೆ ಮಣ್ಣಿನ ತಪಾಸಣಾ ಕಾರ್ಡ್‍ಗಳನ್ನು ಒದಗಿಸಲಾಯಿತು. ಮಣ್ಣಿನ ಆರೋಗ್ಯ ಕಾರ್ಡು ಎಂಬುದು ಪ್ರತಿಯೊಂದು ಮಣ್ಣಿನ ಖನಿಜ ಮತ್ತು ಪೆÇೀಷಕಾಂಶಗಳ ಗುಣಲಕ್ಷಣಗಳನ್ನು ವಿವರಿಸುವ ಅಧಿಕೃತ ದಾಖಲೆಯಾಗಿದೆ. ಈ ಕಾರ್ಡ್‍ಗಳು ರೈತರ ಕೃಷಿಭೂಮಿಯ ಮಣ್ಣಿನ ಪ್ರಕಾರಕ್ಕೂ ಉತ್ತಮವಾದ ಮಣ್ಣನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಯಾವ ಮಣ್ಣಿಗೆ ಯಾವ ಬೆಳೆಗಳು ಸೂಕ್ತ ಎಂದು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಅಲ್ಲದೆ ಮಣ್ಣಿನ ಪೆÇೀಷಕಾಂಶಗಳ ಕೊರತೆಯನ್ನು ತುಂಬಲು ಮತ್ತು ಅತಿಯಾದ ಗೊಬ್ಬರವನ್ನು ತಪ್ಪಿಸಲು ಅಗತ್ಯವಿರುವ ರಸಗೊಬ್ಬರಗಳ ಪ್ರಮಾಣ ಮತ್ತು ಪ್ರಕಾರವನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ. ಮಣ್ಣು ತಪಾಸಣಾ ವರದಿಗಳ ಆಧಾರದ ಮೇಲೆ ಕೃಷಿ ಮಾಡುವುದರಿಂದ ರೈತರು ವೆಚ್ಚವನ್ನು ಕಡಿಮೆ ಮಾಡಿ ಉತ್ಪಾದಕತೆಯನ್ನು ಹೆಚ್ಚಿಸಬಹುದು. ಮಣ್ಣಿನ ಕಾರ್ಡ್‍ಗಳು ಅನಗತ್ಯ ರಸಗೊಬ್ಬರ ಬಳಕೆಯನ್ನು ತಪ್ಪಿಸಿ ಸರಿಯಾದ ರೀತಿಯಲ್ಲಿ ಕೃಷಿ ಮಾಡಲು ಮಾರ್ಗದರ್ಶನ ನೀಡಲೂ ಸಹಕಾರಿಯಾಗಿದೆ ಎಂದು ಕಾಸರಗೋಡು ಆತ್ಮ ಯೋಜನಾ ನಿರ್ದೇಶಕ ಕೆ.ಆನಂದ ತಮ್ಮ ವರದಿಯಲ್ಲಿ ಸಪಷ್ಟಪಡಿಸಿದರು.
ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಟಿ.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಕೆ.ಭೂಪೇಶ್, ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ರಜಿನಿ ಕೃಷ್ಣನ್, ಪನತ್ತಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸನ್ನ ಪ್ರಸಾದ್, ಕಾಸರಗೋಡು ಜಿಲ್ಲಾ ಜಂಟಿ ನಿರ್ದೇಶಕ ಆರ್.ಶೈನಿ, ಪರಪ್ಪ ಬ್ಲಾಕ್ ಪಂಚಾಯಿತಿ ಕಾರ್ಯದರ್ಶಿ ಕೆ.ಸುನೀಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಪರಪ್ಪ ಬ್ಲಾಕ್ ಪಂಚಾಯತ್ ಎ.ಡಿ.ಎ. ಎ. ವಿನೋದಿನಿ ಸ್ವಾಗತಿಸಿದರು. ಕೋಡೋಬೇಲೂರು ಕೃಷಿ ಅಧಿಕಾರಿ ಕೆ.ವಿ. ಹರಿತ ವಂದಿಸಿದರು.


