ಕುಂಬಳೆ: ಕುಂಬಳೆ ಠಾಣೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂದ್ಯೋಡು ಸನಿಹದ ಮಳ್ಳಂಗೈ ಎಂಬಲ್ಲಿ ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಕಿರುಕುಳಕ್ಕೆ ಯತ್ನಿಸಿದ ಯುವಕನನ್ನು ನಾಗರಿಕರು ಸೆರೆಹಿಡಿದು ತಕ್ಕ ಶಾಸ್ತಿ ನೀಡಿ ಪೊಲೀಸರಿಗೊಪ್ಪಿಸಿದ್ದಾರೆ.
ಸೋಮವಾರ ಸಂಜೆ ಬಸ್ಸಿಳಿದು ಮನೆ ಕಡೆ ನಡೆದುಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸದ ಕಾರ್ಮಿಕ, ವಡಗರ ನಿವಾಸಿ ಹಿಂಬಾಲಿಸಿ ಹೋಗಿರುವುದಲ್ಲದೆ, ಆಕೆಗೆ ಕಿರುಕುಳಕ್ಕೆ ಯತ್ನಿಸಿದ್ದು, ಸ್ಥಳೀಯರು ಆಗಮಿಸಿ ಆರೋಪಿಯನ್ನು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ವಿದ್ಯಾರ್ಥಿನಿ ಅಥವಾ ಆರೋಪಿ ಕಡೆಯಿಂದ ದೂರು ಲಭಿಸದ ಹಿನ್ನೆಲೆಯಲ್ಲಿ ಈ ಬಗ್ಗೆ ಕೇಸು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆಯೂ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ತೆರಳುತ್ತಿದ್ದ ಆರೋಪಿಗೆ ವಿದ್ಯಾರ್ಥಿನಿ ಸಂಬಂಧಿಕರು ಹಾಗೂ ನಾಗರಿಕರು ಎಚ್ಚರಿಕೆ ನೀಡಿದ್ದರೂ, ಆರೋಪಿ ತನ್ನ ಕಿಡಿಗೇಡಿಕೃತ್ಯ ಮುಂದುವರಿಸಿದ್ದನು.
ಆರೋಪಿ ಸೆರೆ ಹಿಡಿದವರಿಗೇ ಕೇಸು!;
ವಿದ್ಯರ್ಥಿನಿಯನ್ನು ಹಿಂಬಾಲಿಸಿ ಕಿರುಕುಳಕ್ಕೆ ಯತ್ನಿಸಿದ ಆರೋಪಿಯನ್ನು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯ ನಾಗರಿಕರ ಮೇಲೆಯೇ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿಗೆ ಥಳಿಸಿರುವುದಲ್ಲದೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ 15 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಿಜೆಪಿ ಕೋಯಿಕ್ಕೋಡ್ ವಲಯ ಸಮಿತಿ ಉಪಾಧ್ಯಕ್ಷ ವಿಜಯ್‍ಕುಮಾರ್ ರೈ ಹಾಗೂ ಮಳ್ಳಂಗೈ ನಿವಾಸಿ ಪ್ರಜನೀಶ್ ಎಂಬವರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದುಪೊಲೀಸರು ತಿಳಿಸಿದ್ದಾರೆ.




