ಬದಿಯಡ್ಕ: ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ 28 ನೇ ವರ್ಷದ ತಿರುಗಾಟದ ಉದ್ಘಾಟನೆ ಕೊಲ್ಲಂಗಾನದಲ್ಲಿ ಪ್ರಥಮ ಸೇವೆಯಾಟದೊಂದಿಗೆ ಬುಧವಾರ ಜರಗಿತು. "ಬಲಿಪರತ್ನ ಪ್ರಶಸ್ತಿ" ವಿಜೇತ ಯಕ್ಷಗಾನ ಕಲಾವಿದ ರವಿ ಅಲೆವೂರಾಯ ವರ್ಕಾಡಿ ಅವರು ಮಂಡಳಿಯಲ್ಲಿ ಕಲಾವಿದನಾಗಿ ಇನ್ನು ಮುಂದೆಯೂ ಸಹಕಾರ ನೀಡುವುದರೊಂದಿಗೆ ಯಕ್ಷಗಾನ ವಿಶ್ವಗಾನವಾಗಲಿ ಎಂದು ಉದ್ಘಾಟಿಸಿ ತಿಳಿಸಿದರು.
ಯಕ್ಷಗಾನ ಕಲಾವಿದ, ಸಂಘಟಕ, ಕಲಾ ಪೋಷಕ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿ, ಯಕ್ಷಗಾನ ದೈವಿಕ ಕಲೆ, ಗಂಡುಮೆಟ್ಟಿನ ಕಲೆ, ಯಕ್ಷಗಾನ ಜನ ಮಾನಸದಲ್ಲಿ ಅವಿಭಾಜ್ಯ ಅಂಗವಾಗಿ ನಮ್ಮ ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತಿದೆ ಹಾಗೂ ಇದುವರೆಗೆ ಎಲ್ಲರ ಬೆಂಬಲ ಅಗತ್ಯ ಎಂದು ತಿಳಿಸಿದರು.
ನಿವೃತ್ತ ಉಪಾಧ್ಯಾಯ ಉದಯಕುಮಾರ್ ಪುತ್ತೂರು, ಪ್ರೊ.ಎ..ಶ್ರೀನಾಥ್ ಶುಭ ಹಾರೈಸಿದರು. ಯಕ್ಷಗಾನ ಭಾಗವತ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಾ ವಂದಿಸಿದರು. ರವಿ ಶೆಟ್ಟಿ ಕೊಲ್ಲಂಗಾನ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ಯಕ್ಷಗಾನ ಕಲಾವಿದರಾದ ಪಾತಾಳ ವೆಂಕಟ್ರಮಣ ಭಟ್, ದಿನೇಶ ಅಮ್ಮಣ್ಣಾಯ, ಸದಾಶಿವ ಶೆಟ್ಟಗಾರ, ಶಂಭು ಶರ್ಮ ವಿಟ್ಲ ಇವರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಬಳಿಕ ಮೇಳದ ವ್ಯವಸ್ಥಾಪಕ ಗಣಾಧಿರಾಜ ಉಪಾಧ್ಯಾಯ ಅವರ ನೇತೃತ್ವದಲ್ಲಿ ರವಿ ಅಲೆವೂರಾಯ ವಿರಚಿತ ನೂತನ ಪ್ರಸಂಗ "ಗಣೇಶ ಮಹಿಮೆ" ಯಕ್ಷಗಾನ ಪ್ರದರ್ಶನ ಜರಗಿತು.




.jpg)
