ಚಂಢೀಗಡ: ಹೊಸದಾಗಿ ರಚನೆಯಾಗಿರುವ ಖಾಲಿಸ್ತಾನ ಪರ ಗುಂಪು ಶೇರ್-ಎ-ಪಂಜಾಬ್ ಬ್ರಿಗೇಡ್ ಪಂಜಾಬಿನ ಫಿರೋಝ್‌ಪುರ ನಗರದಲ್ಲಿ ಆರೆಸ್ಸೆಸ್ ನಾಯಕನ ಪುತ್ರನ ಹತ್ಯೆಯ ಹೊಣೆಯನ್ನು ವಹಿಸಿಕೊಂಡಿದೆ.
ಶನಿವಾರ ಸಂಜೆ ಏಳು ಗಂಟೆಯ ಸುಮಾರಿಗೆ ಆರೆಸ್ಸೆಸ್ ನಾಯಕ ಬಲದೇವ ರಾಜ್ ಅರೋರಾರ ಪುತ್ರ ನವೀನ ಅರೋರಾ ತನ್ನ ಅಂಗಡಿಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬಾಬಾ ನೂರ್ ಶಾ ವಲಿ ದರ್ಗಾದ ಬಳಿ ಬೈಕ್ ನಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರನ್ನು ಸಮೀಪದಿಂದ ಗುಂಡಿಟ್ಟು ಹತ್ಯೆ ಮಾಡಿದ್ದರು.
ಆರೆಸ್ಸೆಸ್ ಪಂಜಾಬಿನಲ್ಲಿ ಸಿಕ್ಖರನ್ನು ಹಿಂದು ಧರ್ಮದಲ್ಲಿ ಸಮೀಕರಿಸುತ್ತಿದೆ ಎಂದು ಶೇರ್-ಎ-ಪಂಜಾಬ್ ಬ್ರಿಗೇಡ್ ಸೋಮವಾರ ಆರೋಪಿಸಿದೆ.
ಪರಮಜಿತ್ ಸಿಂಗ್ ಹೆಸರಿನಲ್ಲಿ ಸಹಿ ಇರುವ ಮತ್ತು ಗುಂಪಿನ ವಕ್ತಾರ ಬಹಾದುರ್ ಸಿಂಗ್ ಸಂಧು ಹೊರಡಿಸಿರುವ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದು, ಖಾಲಿಸ್ತಾನದ ಸ್ವಾತಂತ್ರ್ಯಕ್ಕಾಗಿ ಈ ಗುಂಪು ರಚನೆಯಾಗಿದೆ ಎಂದು ಹೇಳಿಕೊಂಡಿದೆ.
ಭವಿಷ್ಯದಲ್ಲಿ ಆರೆಸ್ಸೆಸ್, ಶಿವಸೇನೆ, ಪೋಲಿಸ್ ಮತ್ತು ಮಿಲಿಟರಿ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ಎಚ್ಚರಿಕೆ ನೀಡಲಾಗಿದೆ.




