HEALTH TIPS

ವಿಮಲ್ ನೇಗಿ ಮೃತ್ಯು ಪ್ರಕರಣ | 'ಸಂಪೂರ್ಣ ಬೋಗಸ್ ಅಧಿಕಾರಿಗಳು': ಸಿಬಿಐ ತನಿಖೆಯ ಸಾಮರ್ಥ್ಯವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಹಿಮಾಚಲ ಪ್ರದೇಶ ವಿದ್ಯುತ್ ನಿಗಮ ಲಿಮಿಟೆಡ್ (HPPCL) ಅಧಿಕಾರಿ ವಿಮಲ್ ನೇಗಿ ಅವರ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ಸಾಮರ್ಥ್ಯವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ. ತನಿಖೆ ನಡೆಸುತ್ತಿರುವ ಕೆಲ ಅಧಿಕಾರಿಗಳು ಸೇವೆಗೆ ಅಯೋಗ್ಯರು ಎಂದು ಕೋರ್ಟ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದು, ಅವರನ್ನು "ಸಂಪೂರ್ಣ ಬೋಗಸ್ ಅಧಿಕಾರಿಗಳು" ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠವು ದೇಶ್ ರಾಜ್ ಎಂಬ HPPCL ಹಿರಿಯ ಅಧಿಕಾರಿಯೊಬ್ಬರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡುತ್ತಿದ್ದ ಸಂದರ್ಭ ಈ ಮಾತುಗಳನ್ನು ಹೇಳಿದೆ.

"ತನಿಖಾಧಿಕಾರಿಗಳು ಕೇಳಿರುವ ಪ್ರಶ್ನೆಗಳು ಬಾಲಿಶ ಮಟ್ಟದಲ್ಲಿವೆ. ಇಂತಹ ಪ್ರಶ್ನೆಗಳು ಕೇಳುವವರು ಸಿಬಿಐಯಲ್ಲಿ ಹಿರಿಯ ಅಧಿಕಾರಿಯಾಗಿದ್ದರೆ, ಅದು ಸಂಸ್ಥೆಯ ಸ್ಥಿತಿಯ ಮೇಲೆ ಕನಿಕರ ಬರುವಂತಿದೆ. 'ಇದಕ್ಕಾಗಿ ನಿಮಗೆ ವರ್ಗಾವಣೆ ಮಾಡಲಾಯಿತೇ?' ಎಂಬ ರೀತಿಯ ಪ್ರಶ್ನೆಗಳು ಆರೋಪಿಗೆ ಕೇಳುವುದೇ? ಅವರು ಏನು ಉತ್ತರ ನೀಡುತ್ತಾರೆ ಎಂದು ನೀವು ನಿರೀಕ್ಷಿಸುತ್ತೀರಿ? ಸಹಜವಾಗಿಯೇ ಅವರು ನಿರಾಕರಿಸುವರು. ಅದನ್ನು ನೀವು 'ಅಸಹಕಾರ' ಎಂದು ಹೇಗೆ ಪರಿಗಣಿಸುತ್ತೀರಿ?" ಎಂದು ಪೀಠ ಖಾರವಾಗಿ ಪ್ರಶ್ನಿಸಿತು.

"ಸಿಬಿಐನಲ್ಲಿ ಯಾವ ತರದ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ? ಪೂರ್ತಿ ಬೋಗಸ್ ಅಧಿಕಾರಿಗಳು. ಇವರೆಲ್ಲ ಸೇವೆಯಲ್ಲಿ ಇರಲು ಯೋಗ್ಯರಲ್ಲ. ಪ್ರಕರಣದಲ್ಲಿ ಯಾವುದೇ ಭೌತಿಕ ಪುರಾವೆಗಳಿಲ್ಲ, ಕೇವಲ ಊಹಾಪೋಹಗಳನ್ನೇ ದಾಖಲೆ ಮಾಡಲಾಗಿದೆ," ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿತು.

ವಿಮಲ್ ನೇಗಿ ಅವರನ್ನು HPPCLನ ಹಿರಿಯ ಅಧಿಕಾರಿಗಳಾದ ವ್ಯವಸ್ಥಾಪಕ ನಿರ್ದೇಶಕ ಹರಿಕೇಶ್ ಮೀನಾ, ನಿರ್ದೇಶಕ (ವಿದ್ಯುತ್) ದೇಶ್ ರಾಜ್ ಹಾಗೂ ಮತ್ತೊಬ್ಬರು ಮಾನಸಿಕವಾಗಿ ಹಿಂಸಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ನೇಗಿಯ ಕುಟುಂಬ ಸದಸ್ಯರು, ತಪ್ಪು ಮಾಡಲು ಒತ್ತಡ ಹೇರಲಾಗಿದ್ದು, ಅದರ ಪರಿಣಾಮವಾಗಿ ತೀವ್ರ ಮಾನಸಿಕವಾಗಿ ಹಿಂಸೆಗೊಳಗಾದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ದೇಶ್ ರಾಜ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಸಿಬಿಐ "ತನಿಖೆಗೆ ಸಹಕರಿಸಲಿಲ್ಲ" ಎಂದು ಮಾಡಿದ ಆರೋಪವನ್ನು ಪೀಠ ಗಂಭೀರವಾಗಿ ಪ್ರಶ್ನಿಸಿದ್ದು, ದೇಶ್ ರಾಜ್ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries