HEALTH TIPS

ಸಾಧಕರು ಬೆಳಕು ನೀಡುವ ದೀಪಸ್ತಂಭಗಳು: ನೆನಪಿನ ಸಂಪುಟ ಬಿಡುಗಡೆಗೊಳಿಸಿ ಡಾ. ವಸಂತಕುಮಾರ ಪೆರ್ಲ ಅಭಿಮತ

ಬದಿಯಡ್ಕ: ಸಾಧಕರು ನಾಡಿಗೆ ಬೆಳಕು ನೀಡುವ ದೀಪಸ್ತಂಭಗಳಿದ್ದಂತೆ. ಅವರ ಬದುಕು ಮುಂದಿನ ತಲೆಮಾರಿಗೆ ಮಾರ್ಗದರ್ಶನದ ಬೆಳಕು ನೀಡುತ್ತಿರುತ್ತದೆ. ಕಿರಿಯರು ಆ ಬೆಳಕಿನಲ್ಲಿ ಮುನ್ನಡೆಯುತ್ತಿರುತ್ತಾರೆ. ಇಂತಹ ಸಾರ್ಥಕ ಕೆಲಸಗಳಿಂದ  ಸನಾತನತೆ ಮತ್ತು ಪರಂಪರೆ ಮುಂದುವರಿಯುತ್ತದೆ ಎಂದು ಪ್ರಸಿದ್ಧ ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಹೇಳಿದರು. 


ಪಳ್ಳತ್ತಡ್ಕದ ಮುದ್ದು ಮಂದಿರದಲ್ಲಿ ಪರಮೇಶ್ವರ ಭಟ್ಟರ ವರ್ಷಾಬ್ದಿಕ ಸಮಾರಂಭದಲ್ಲಿ ಪಂಜರಿಕೆ ಗಣಪತಿ ಭಟ್ಟರು ಸಂಪಾದಿಸಿದ ಪುರೋಹಿತರತ್ನ ಪಳ್ಳತ್ತಡ್ಕ ಪರಮೇಶ್ವರ ಭಟ್ಟರು ಎಂಬ ನೆನಪಿನ ಸಂಪುಟವನ್ನು ಬಿಡುಗಡೆಗೊಳಿಸಿ ಅವರು ಮಾತಾಡುತ್ತಿದ್ದರು.

ವೈದಿಕ ಕ್ಷೇತ್ರದಲ್ಲಿ  ಪಳ್ಳತ್ತಡ್ಕ ಪರಮೇಶ್ವರ ಭಟ್ಟರು ದೊಡ್ಡ ಕ್ರಾಂತಿಯನ್ನು ಮಾಡಿದರು. ವೈದಿಕ, ಶೈಕ್ಷಣಿಕ, ಸಾಂಸ್ಕøತಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಸಾಧನೆಯ ವ್ಯಾಪ್ತಿ ದೊಡ್ಡದಾಗಿದೆ. ಅವರು ಒಳ್ಳೆಯ ವಾಗ್ಮಿ ಮತ್ತು ತಾಳಮದ್ದಳೆಯ ಅರ್ಥದಾರಿಗಳೂ ಹೌದು. ಅವರ ಸಾಧನೆಯ ಬಗ್ಗೆ ಮುಂದಿನ ತಲೆಮಾರಿಗೆ ತಿಳಿಯಪಡಿಸುವುದು ಅಗತ್ಯವಾಗಿ ಆಗಬೇಕಾದ ಕೆಲಸ ಎಂದು ಡಾ. ಪೆರ್ಲ ಹೇಳಿದರು. 

ಕೃತಿಯಲ್ಲಿ ಪರಮೇಶ್ವರ ಭಟ್ಟರ ವ್ಯಕ್ತಿತ್ವ ಮತ್ತು ಸಾಧನೆಯ ಬಗ್ಗೆ ಬೇರೆ ಬೇರೆ ಲೇಖಕರು ಬರೆದ ಲೇಖನಗಳಿವೆ. ಇಂತಹ ಸಾಧಕ ಮಹನೀಯರ ಬಗ್ಗೆ ಕೃತಿ ಪ್ರಕಟಿಸುವುದು ಸೂಕ್ತ ಎಂದು ಮನಗಂಡು ಈ ಸಾಹಸಕ್ಕೆ ಕೈಹಾಕಿದೆವು ಎಂದು ಸಂಪಾದಕರಾದ ಪಂಜರಿಕೆ ಗಣಪತಿ ಭಟ್ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು. ಹಿರಿಯ ಪುತ್ರ ಸುಬ್ರಹ್ಮಣ್ಯ ಭಟ್ ಅವರು ತಂದೆಯ ಬಗೆಗಿನ ತನ್ನ ನೆನಪುಗಳನ್ನು ಹಂಚಿಕೊಂಡರು. 

ವೇದಿಕೆಯಲ್ಲಿ ಇನ್ನಿಬ್ಬರು ಪುತ್ರರಾದ ಶಿವಶಂಕರ ಭಟ್ ಮತ್ತು ಶಶಿಧರ ಭಟ್ ಉಪಸ್ಥಿತರಿದ್ದರು. ಗಣ್ಯರಾದ ಕುರಿಯತ್ತಡ್ಕ ವಿಶ್ವೇಶ್ವರ ಶಾಸ್ತ್ರಿ, ಮಿತ್ತೂರು ಸದಾಶಿವ ಭಟ್, ಮಡಪ್ಪಾಡಿ ಕೃಷ್ಣ ಭಟ್, ಮಿಂಚಿನಡ್ಕ ಪುರುಷೋತ್ತಮ ಭಟ್, ಕರುವಜೆ ಕೇಶವ ಜೋಯಿಸ ಮತ್ತು ಪಕಳಕುಂಜ ಶಂಭು ಭಟ್ಟ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಳೂರು ಕೃಷ್ಣ ಭಟ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries