ಕಾಸರಗೋಡು: ಪರವನಡ್ಕ ತಲಕ್ಲಾಯಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಗರ್ಭಗುಡಿ ಹಾಗೂ ಕಚೇರಿ ಬಾಗಿಲು ಒಡೆದು ನುಗ್ಗಿದ ಕಳ್ಳರು ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ದೋಚಿದ್ದಾರೆ. ಕ್ಷೇತ್ರ ಕಚೇರಿಯ ಲಾಕರ್‍ನಲ್ಲಿ ಇರಿಸಲಾಗಿದ್ದ ತಲಾ 25ಸಾವಿರ ರೂ. ಬೆಲೆಯ ಎರಡು ಸ್ವರ್ಣ ಮುದ್ರೆಯ ಬಳೆ ಮತ್ತು ಆಭರಣ, 15ಸಾವಿರ ರೂ. ಬೆಲೆಯ ಬೆಳ್ಳಿಯ ನಾಗಪ್ರತಿಮೆ ಮತ್ತು 25ಸಾವಿರ ರೂ.ನಗದು ದೋಚಲಾಗಿದೆ. ದೇವರ ಎದುರಿಗಿದ್ದ ಹಾಗೂ ಹೊರಾಂಗಣದ ಗುಳಿಗ-ರಕ್ತೇಶ್ವರೀ ದೈವದ ಕಾಣಿಕೆ ಹುಂಡಿ ಒಡೆದುಹಾಕಲಾಗಿದೆ.
ಶನಿವಾರ 7ರಿಂದ ಆದಿತ್ಯವಾರ ಬೆಳಗ್ಗೆ 5ರ ಮಧ್ಯೆ ಕಳ್ಳತನ ನಡೆದಿರುವುದಾಗಿ ಸಂಶಯಿಸಲಾಗಿದೆ. ಸುಮಾರು 2 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಮುಂಜಾನೆ ಕ್ಷೇತ್ರಕ್ಕೆ ತಲುಪಿದ ಅರ್ಚಕರಿಗೆ ಕಳವಿನ ಬಗ್ಗೆ ಮಾಹಿತಿ ಲಭಿಸಿದ್ದು, ಕ್ಷೇತ್ರ ಸಮಿತಿ ಉಪಾಧ್ಯಕ್ಷ ಆನಂದ್ ಅವರು ನೀಡಿದ ದೂರಿನನ್ವಯ ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪೊಲೀಸರು, ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.




