ಅಂಬಿಕಾಪುರ: ಚತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯಲ್ಲಿ ತೆರೆದ ಕಲ್ಲಿದ್ದಲು ಗಣಿಯ ವಿಸ್ತರಣೆ ವಿರೋಧಿಸಿ ಗ್ರಾಮಸ್ಥರ ಬುಧವಾರ ನಡೆಸಿದ ಪ್ರತಿಭಟನೆ ಸಂದರ್ಭ ಪೊಲೀಸರೊಂದಿಗೆ ಘರ್ಷಣೆ ನಡೆದಿದೆ.
ಈ ಘರ್ಷಣೆಯ ಸಂದರ್ಭ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿರುವುದುರಿಂದ 30ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಸ್ರಮ್‌ಪುರ ಪ್ರದೇಶದ ಪರಸೋಡಿ ಕಾಲ ಗ್ರಾಮದ ನಿವಾಸಿಗಳು ಕೋಲ್ ಇಂಡಿಯಾದ ಉಪ ಸಂಸ್ಥೆಯಾದ ಸೌಥ್ ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್ (ಎಸ್‌ಇಸಿಎಲ್)ನ ಅಮೆರಾ ಕಲ್ಲಿದ್ದಲು ಯೋಜನೆಯನ್ನು ವಿಸ್ತರಿಸುವುದನ್ನು ವಿರೋಧಿಸುತ್ತಿದ್ದಾರೆ. ಈ ಯೋಜನೆಗಾಗಿ ಭೂಮಿಯನ್ನು ಈ ಹಿಂದೆಯೇ ವಶಪಡಿಸಿಕೊಳ್ಳಲಾಗಿದೆ. ಆದರೂ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಭಟನೆ ಬಗ್ಗೆ ಮಾಹಿತಿ ಸ್ವೀಕರಿಸಿದ ಬಳಿಕ ಲಖಿಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶಕ್ಕೆ ಜಿಲ್ಲಾ ಅಧಿಕಾರಿಗಳು ಪೊಲೀಸರೊಂದಿಗೆ ತೆರಳಿದರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸುನಿಲ್ ನಾಯಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೆಲವು ಗ್ರಾಮಸ್ಥರು ಭೂಸ್ವಾಧೀನಕ್ಕೆ ಪರಿಹಾರ ಸ್ವೀಕರಿಸಿದರು. ಹಲವರು ಪರಿಹಾರ ಸ್ವೀಕರಿಸಲು ನಿರಾಕರಿಸಿದರು. ಅಲ್ಲದೆ ಗಣಿಗಾರಿಕೆಗೆ ಅಡ್ಡಿಪಡಿಸಲು ಪ್ರಯತ್ನಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ
''ಕಲ್ಲು ತೂರಾಟದಿಂದ 30ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. ಗಣಿಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳು ಪುನಾರಂಭಗೊಂಡಿವೆ ಎಂದು ಸುರ್ಗುಜಾದ ರಂಗೆಯ ಐಜಿಪಿ ದೀಪಕ್ ಝಾ ತಿಳಿಸಿದ್ದಾರೆ.




