ಸಚಿವರ ಪ್ರಕಾರ, ಸೆಪ್ಟೆಂಬರ್ 30ರವರೆಗೆ ಲಭ್ಯವಿರುವ ಡೇಟಾ ಆಧಾರದಲ್ಲಿ, ಎಲ್‌ಐಸಿಯ ಹೂಡಿಕೆಗಳಲ್ಲಿ ಈಕ್ವಿಟಿಯಲ್ಲಿ 38,658.85 ಕೋಟಿ ರೂಪಾಯಿ ಮತ್ತು ಸಾಲವಾಗಿ 9,625.77 ಕೋಟಿ ರೂಪಾಯಿ ಸೇರಿವೆ. ಜೊತೆಗೆ, ಎಲ್‌ಐಸಿ ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಇಕನಾಮಿಕ್ ಝೋನ್(APSEZ) ಹೊರಡಿಸಿದ 5,000 ಕೋಟಿ ರೂಪಾಯಿ ಸುರಕ್ಷಿತ ಪರಿವರ್ತಿಸಲಾಗದ ಡಿಬೆಂಚರ್‌ಗಳನ್ನು ಖರೀದಿಸಿದೆ.
ಸಂಸದರಾದ ಮುಹಮ್ಮದ್ ಜಾವೇದ್ ಮತ್ತು ಮಹುವಾ ಮೊಯಿತ್ರಾ ಅವರು ಕೇಳಿದ ಪ್ರಶ್ನೆಗೆ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದ್ದು, ಎಲ್‌ಐಸಿಗೆ ಹೂಡಿಕೆ ಕುರಿತಂತೆ ಸರ್ಕಾರ ಅಥವಾ ಡಿಎಫ್‌ಎಸ್ ಯಾವುದೇ ನಿರ್ದೇಶನ ನೀಡಿಲ್ಲ. ಹೂಡಿಕೆ ನಿರ್ಧಾರಗಳು ಎಲ್‌ಐಸಿಯೇ ಅನುಸರಿಸುವ ಸರಿಯಾದ ಶ್ರದ್ಧೆ, ಅಪಾಯ ಮೌಲ್ಯಮಾಪನ ಮತ್ತು ವೈಧಾನಿಕ ಅನುಸರಣೆಯ ಪ್ರಕ್ರಿಯೆಗಳ ಆಧಾರದಲ್ಲೇ ತೆಗೆದುಕೊಳ್ಳಲಾಗುತ್ತವೆ ಎಂದು ಉತ್ತರಿಸಿದೆ.
ಹೂಡಿಕೆಗಳನ್ನು ವಿಮೆ ಕಾಯಿದೆ - 1938 ಮತ್ತು ಐಆರ್‌ಡಿಎಐ, ಆರ್‌ಬಿಐ, ಸೆಬಿ ಹೊರಡಿಸುವ ನಿಯಮಾವಳಿ ನಿಯಂತ್ರಿಸುತ್ತವೆ. ಎಲ್‌ಐಸಿಯ ಹೂಡಿಕೆ ಕಾರ್ಯಗಳು ಸಮಕಾಲೀನ, ಶಾಸನಬದ್ಧ, ಸಿಸ್ಟಮ್ ಲೆಕ್ಕಪರಿಶೋಧಕರು, ಐಎಫ್‌ಸಿ ತಂಡ ಮತ್ತು ವಿಜಿಲೆನ್ಸ್ ಘಟಕಗಳಿಂದ ಪರಿಶೀಲನೆಯಾಗುತ್ತವೆ. ಜೊತೆಗೆ, ಐಆರ್‌ಡಿಎಐ ಕೂಡ ನಿಯತಕಾಲಿಕ ಪರಿಶೀಲನೆಗಳನ್ನು ನಡೆಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಎಲ್‌ಐಸಿ ಹೂಡಿಕೆ ಮಾಡಿರುವ ಎಲ್ಲಾ ಖಾಸಗಿ ಕಂಪೆನಿಗಳ ವಿವರ ಕೇಳಿದಾಗ, ಸರ್ಕಾರ "ಅಂತಹ ಸಮಗ್ರ ಪಟ್ಟಿ ಒದಗಿಸುವುದು ವಾಣಿಜ್ಯಿಕವಾಗಿ ಸೂಕ್ತವಲ್ಲ ಮತ್ತು ಮಾರುಕಟ್ಟೆ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ" ಎಂದು ಸ್ಪಷ್ಟಪಡಿಸಿದೆ.
ಎಲ್‌ಐಸಿಯ ಹೂಡಿಕೆಗಳು ಅದಾನಿ ಗ್ರೂಪ್ ನ ಏಳು ಕಂಪೆನಿಗಳಾದ ಅದಾನಿ ಎಂಟರ್‌ಪ್ರೈಸಸ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಎನರ್ಜಿ ಸೊಲ್ಯೂಷನ್ಸ್, ಎಪಿಎಸ್‌ಇಝಡ್, ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿಗಳಲ್ಲಿ ಹರಡಿಕೊಂಡಿವೆ. ಅದಾನಿ ಪೋರ್ಟ್ಸ್ ಎಲ್‌ಐಸಿಯ ಖಾಸಗಿ ವಲಯದಲ್ಲಿ ಐದನೇ ಅತಿ ಹೆಚ್ಚು ಸಾಲ ಹೂಡಿಕೆ ಪಡೆದ ಕಂಪೆನಿ ಎಂದು ಸರ್ಕಾರ ತಿಳಿಸಿದೆ.
ಮಾರುಕಟ್ಟೆ ಹೂಡಿಕೆಗಳ ಹಿನ್ನೆಲೆಯಲ್ಲಿ, NSE-BSE ಪಟ್ಟಿ ಟಾಪ್ 500 ಕಂಪೆನಿಗಳಲ್ಲೇ ಎಲ್‌ಐಸಿಯ ಹೆಚ್ಚಿನ ಹೂಡಿಕೆ ಇರುತ್ತದೆ. ನಿಫ್ಟಿ 50 ಕಂಪೆನಿಗಳಲ್ಲಿನ ಎಲ್‌ಐಸಿಯ ಹೂಡಿಕೆಗಳ ಪುಸ್ತಕ ಮೌಲ್ಯ 4,30,776.97 ಕೋಟಿ ರೂಪಾಯಿ ಆಗಿದೆ. ಇದು ಸಂಸ್ಥೆಯ ಒಟ್ಟು ಈಕ್ವಿಟಿ ಹೂಡಿಕೆಯ 45.85% ಆಗಿದೆ ಎಂದು ತಿಳಿದು ಬಂದಿದೆ.




