HEALTH TIPS

ಎಸ್‌ಐಆರ್‌ಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ರಾಜ್ಯಗಳಿಗೆ ಸುಪ್ರೀಂಕೋರ್ಟ್ ಆದೇಶ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ನಿರತರಾಗಿರುವ ಬಿಎಲ್‌ಒಗಳು ಎದುರಿಸುತ್ತಿರುವ ಒತ್ತಡವನ್ನು ಕಡಿಮೆಗೊಳಿಸಲು ಸುಪ್ರೀಂಕೋರ್ಟ್ ಗುರುವಾರ ಸರಣಿ ನಿರ್ದೇಶನಗಳನ್ನು ಗುರುವಾರ ಪ್ರಕಟಿಸಿದೆ. ಎಸ್‌ಐಆರ್ ಕಾರ್ಯದ ಒತ್ತಡದಿಂದಾಗಿ ಹಲವು ಬಿಎಲ್‌ಒಗಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ವರದಿಯಾಗಿರುವ ನಡುವೆ ಸುಪ್ರೀಂಕೋರ್ಟ್ ಈ ಆದೇಶ ಹೆಚ್ಚಿನ ಮಹತ್ವವನ್ನು ಪಡೆದಿದೆ.

ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಎಸ್‌ಐಆರ್ ಕರ್ತವ್ಯದಲ್ಲಿರುವ ಸಿಬ್ಬಂದಿಯ ಕೆಲಸದ ಸಮಯವನ್ನು ಕಡಿಮೆಗೊಳಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್‌ಮಾಲ್ಯಾ ಬಾಗ್ಚಿ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ತನ್ನ ಆದೇಶದಲ್ಲಿ ನಿರ್ದೇಶನ ನೀಡಿದೆ.

ಒಂದು ವೇಳೆ ನಿರ್ದಿಷ್ಟ ಕಾರಣಕ್ಕಾಗಿ ಎಸ್‌ಐಆರ್ ಕರ್ತವ್ಯದಿಂದ ತನ್ನನ್ನು ಹೊರತುಪಡಿಸಬೇಕೆಂದು ಯಾವುದೇ ಉದ್ಯೋಗಿಯು ಕೋರಿದಲ್ಲಿ, ರಾಜ್ಯ ಸರಕಾರವು ಅಂತಹ ಮನವಿಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು ಹಾಗೂ ಆ ವ್ಯಕ್ತಿಯ ಜಾಗದಲ್ಲಿ ಇನ್ನೋರ್ವನನ್ನು ನಿಯೋಜಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಒಂದು ವೇಳೆ ಎಸ್‌ಐಆರ್ ಕಾರ್ಯಕ್ಕಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವ ಅಗತ್ಯವಿದ್ದಲ್ಲಿ ರಾಜ್ಯ ಸರಕಾರವು ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಕಾರ್ಯಪಡೆಯನ್ನು ಒದಗಿಸಲು ಬಾಧ್ಯಸ್ಥವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಒಂದು ವೇಳೆ ತನ್ನ ಬೇಡಿಕೆಗೆ ಸರಕಾರದಿಂದ ಯಾವುದೇ ಪರಿಹಾರ ದೊರೆಯದೇ ಇದ್ದಲ್ಲಿ, ಸಂತ್ರಸ್ತ ಸಿಬ್ಬಂದಿಯು ನ್ಯಾಯಾಲಯದ ಮೆಟ್ಟಲೇರಬಹುದಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.

ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ಬಿಎಲ್‌ಓಗಳು ದಯನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ, ಅವರಲ್ಲಿ ಕೆಲವರು ಕೆಲಸದ ಒತ್ತಡದಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಆರೋಪಿಸಿ ತಮಿಳಗ ವೇಟ್ರಿ ಕಳಗಂ (ಟಿವಿಕೆ) ಪಕ್ಷವು, ಭಾರತೀಯ ಚುನಾವಣಾ ಆಯೋಗದ ವಿರುದ್ಧ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಿದ ಬಳಿಕ ಸರ್ವೋಚ್ಚ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries