ರಾಂಚಿ: ಜಾರ್ಖಂಡ್‌ನ ಧನಬಾದ್ ಜಿಲ್ಲೆಯ ಕೆಂದೌದಿಹ್ ಪ್ರದೇಶದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟು, ಹಲವರು ಆಸ್ಪತ್ರೆಗೆ ದಾಖಲಾಗಿದ್ದು, ವಿಷಾನಿಲ ಸೋರಿಕೆಯ ಶಂಕೆ ವ್ಯಕ್ತವಾಗಿದೆ ಎಂದು hindustantimes.com ವರದಿಯಾಗಿದೆ.
ಅನಿಲ ಸೋರಿಕೆಯ ಮೂಲ ಹಾಗೂ ಕಾರಣಗಳನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಸ್ಥಳೀಯರಿಂದ ಪ್ರತಿಭಟನೆ ಪ್ರಾರಂಭವಾಗಿದೆ.
ಬುಧವಾರ ಸಂಜೆ ಪ್ರಿಯಾಂಕಾ ದೇವಿ ಹಾಗೂ ಗುರುವಾರ ಮುಂಜಾನೆ ಲಲಿತಾ ದೇವಿ ಎಂಬ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಸ್ಥಳೀಯರು ತೀವ್ರ ಆತಂಕಕ್ಕೀಡಾಗಿದ್ದಾರೆ. ವಿಷಾನಿಲ ಸೋರಿಕೆಯಿಂದ ಈ ಸಾವುಗಳು ಸಂಭವಿಸಿವೆ ಎಂದು ಸ್ಥಳೀಯರು ಆರೋಪಿಸಿದ್ದರೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಪ್ರದೇಶವು ಸರಕಾರಿ ಸ್ವಾಮ್ಯದ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್‌ನ ಕಲ್ಲಿದ್ದಲು ಗಣಿಗಾರಿಕೆ ಪ್ರದೇಶವಾಗಿದೆ. ಈ ಘಟನೆಯ ಬೆನ್ನಿಗೇ ಈ ಸಂಸ್ಥೆ ಸ್ಥಳೀಯರನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದೆ.
ಕೆಂದೌದಿಹ್ ಬಸ್ತಿ ಪ್ರದೇಶದಿಂದ ನೂರಾರು ಕುಟುಂಬಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ವರದಿಯಾಗಿದೆ.
ವಿಷಾನಿಲ ಸೋರಿಕೆಯ ಪರಿಣಾಮವು ರಜಪೂತ್ ಬಸ್ತಿ, ಮಸ್ಜಿದ್ ಮೊಹಲ್ಲಾ ಹಾಗೂ ಆಫೀಸರ್ ಕಾಲನಿ ಸೇರಿದಂತೆ ಅಂದಾಜು 10,000 ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳಲ್ಲಿ ಆಗಿದೆ ಎಂದು ಹೇಳಲಾಗಿದೆ.




