ಪೆರ್ಲ: ಸ್ವಚ್ಛತೆಯಿಲ್ಲದ ಪರಿಸರ ಸಾಮಾಜಿಕ ಆರೋಗ್ಯ ಹದಗೆಡಲು ಕಾರಣವಾಗಬಹುದು ಎಂಬುದಾಗಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ನಿವೃತ್ತ ಶಿಕ್ಷಕ ಉಮೇಶ್ ಕೆ. ಪೆರ್ಲ ತಿಳಿಸಿದ್ದಾರೆ.
ಅವರು ಪೆರ್ಲ ಸನಿಹದ ಕುರಡ್ಕದ ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ ಆಯೋಜಿಸಿದ 'ಪ್ಲಾಸ್ಟಿಕ್ ತ್ಯಜಿಸಿ ಆರೋಗ್ಯ ಉಳಿಸಿ' ಎಂಬ ಸ್ವಚ್ಛತಾ ಅಭಿಯಾನದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸ್ವಚ್ಛತೆ ಮನೆಯೊಳಗಿಂದ ಆರಂಭಗೊಂಡಾಗ ಸಮಾಜ ಶುಚಿಯಾಗಿರಲು ಸಾಧ್ಯ. ಪ್ರತಿಯೊಬ್ಬನಲ್ಲಿ ಶುಚಿತ್ವದ ಬಗ್ಗೆ ಜಾಗೃತಿ ಮೂಡಿದಾಗ ಮಾತ್ರ ಸಾಮೂಹಿಕ ಸವಚ್ಛತಾ ಅಭಿಯಾನ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು.
ಡಿ ಎಫ್ ಸಿ ಸಂಘಟನೆಯ ಅಧ್ಯಕ್ಷ ಗಣೇಶ್ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಹನೀಫ್ ನಡುಬೈಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಘಟನೆಯ ಕಾರ್ಯದರ್ಶಿ ಪ್ರಶಾಂತ್ ಕುರಡ್ಕ ಉಪಸ್ಥಿತರಿದ್ದರು. ಈ ಸಂದರ್ಭ ತ್ಯಾಜ್ಯ ಸಂಗ್ರಹಕ್ಕಿರುವ ಕಸದ ಬುಟ್ಟಿಯನ್ನು ಸಂಘಟನೆಗೆ ಹಸ್ತಾಂತರಿಸಲಾಯಿತು. ಮುರಳಿ ಮಾಧವ ಸ್ವಾಗತಿಸಿದರು. ರಮೇಶ್ ಕುರಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಮೋದ್ ವಂದಿಸಿದರು.





