ತಿರುವನಂತಪುರಂ: ಕಾಸರಗೋಡು ವೈದ್ಯಕೀಯ ಕಾಲೇಜಿನ(ಉಕ್ಕಿನಡ್ಕ) ಅಭಿವೃದ್ಧಿಗೆ ಒತ್ತಾಯಿಸಿ ಕ್ರಿಯಾ ಸಮಿತಿ ನಡೆಸುತ್ತಿರುವ ಪ್ರತಿಭಟನೆಗಳು ಮತ್ತು ವಿವಾದಗಳಿಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರತಿಕ್ರಿಯಿಸಿದ್ದಾರೆ. ಸಚಿವರ ಫೇಸ್‍ಬುಕ್ ಪೋಸ್ಟ್‍ನಲ್ಲಿ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಎಲ್‍ಡಿಎಫ್ ಸರ್ಕಾರ ಜಾರಿಗೆ ತಂದ ಐತಿಹಾಸಿಕ ಅಭಿವೃದ್ಧಿ ಚಟುವಟಿಕೆಗಳ ಅಂಕಿಅಂಶಗಳನ್ನು ಪಟ್ಟಿ ಮಾಡಲಾಗಿದೆ. ವೈದ್ಯಕೀಯ ಕಾಲೇಜು ಮುಷ್ಕರವು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ತಮ್ಮದೇ ಶಾಸಕರ ವಿರುದ್ಧದ ಸಾರ್ವಜನಿಕ ಕೋಪವನ್ನು ಶಮನಗೊಳಿಸುವ ಪ್ರಯತ್ನವಾಗಿದೆ ಎಂದು ಎಲ್‍ಡಿಎಫ್ ಕೇಂದ್ರಗಳು ಟೀಕಿಸಿದ ಬೆನ್ನಲ್ಲೇ ಸಚಿವರ ಈ ಪ್ರತಿಕ್ರಿಯೆ ಬಂದಿದೆ.
ಕಳೆದ ಎರಡು ಎಲ್‍ಡಿಎಫ್ ಸರ್ಕಾರಗಳ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿಯೇ ಆರೋಗ್ಯ ಕ್ಷೇತ್ರದಲ್ಲಿ 814 ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ ಎಂದು ಸಚಿವರು ಗಮನಸೆಳೆದಿದ್ದಾರೆ. ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಬ್ಲಾಕ್‍ನ ನಿರ್ಮಾಣ ಮತ್ತು ಸಲಕರಣೆಗಳಿಗಾಗಿ 2023 ರಲ್ಲಿ ಕಿಪ್ಬಿ ಮೂಲಕ 169 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು. ಕಾನೂನು ಅಡೆತಡೆಗಳಿಂದಾಗಿ ಸ್ಥಗಿತಗೊಂಡಿದ್ದ ನಿರ್ಮಾಣ ಕಾರ್ಯವನ್ನು ಪ್ರಕರಣಗಳನ್ನು ಮುಚ್ಚಿ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ಪುನರಾರಂಭಿಸಲಾಗಿದೆ ಎಂದು ಸಚಿವರು ಹೇಳಿದರು.
ಕಾಸರಗೋಡಿನ ಚರ್ಯೆ ಬದಲಿಸಿದ ಅಭಿವೃದ್ಧಿಗಳು:
ಜಿಲ್ಲೆಯ ಜೀವಮಾನದ ಕನಸಾಗಿದ್ದ ಹಲವು ಯೋಜನೆಗಳು ನನಸಾಗಿವೆ ಎಂದು ಸಚಿವರ ಪೋಸ್ಟ್ ಹೇಳುತ್ತದೆ. ವೈದ್ಯಕೀಯ ಕಾಲೇಜಲ್ಲಿ 50 ಎಂಬಿಬಿಎಸ್ ಸೀಟುಗಳು, ನರ್ಸಿಂಗ್ ಕಾಲೇಜು, 29 ಕೋಟಿ ರೂ. ಮೌಲ್ಯದ ಹಾಸ್ಟೆಲ್ ನಿರ್ಮಾಣ ನಡೆದಿದೆ.
ಕಾಞಂಗಾಡ್ ಜಿಲ್ಲಾ ಆಸ್ಪತ್ರೆ: ಕ್ಯಾಥ್ ಲ್ಯಾಬ್, ನರವಿಜ್ಞಾನ ವಿಭಾಗ, 8 ಕೋಟಿ ರೂ. ಮೌಲ್ಯದ ಅಭಿವೃದ್ಧಿ, ಸ್ಟ್ರೋಕ್ ಘಟಕ ವ್ಯವಸ್ಥೆಗೊಳಿಸಲಾಗಿದೆ.
ಟಾಟಾ ಆಸ್ಪತ್ರೆ: 23.50 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಆಸ್ಪತ್ರೆಯಾಗಿ ಪರಿವರ್ತಿಸುವ ಕೆಲಸ ಪ್ರಾರಂಭವಾಗಿದೆ ಎಮದು ಸಚಿವೆ ಬೊಟ್ಟುಮಾಡಿದ್ದಾರೆ.
ತಾಯಿ-ಶಿಶು ಆಸ್ಪತ್ರೆ: 9.41 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಪೂರ್ಣಗೊಂಡಿದ್ದು, ಕಾರ್ಯಾಚರಣೆಗಳು ಪ್ರಾರಂಭವಾಗಿವೆ.
ಇದಲ್ಲದೆ, ಮಂಗಲ್ಪಾಡಿ, ಬೇಡಡ್ಕ, ಪೂಡಂಕಲ್ಲು, ನೀಲೇಶ್ವರ, ತ್ರಿಕರಿಪುರ ಮತ್ತು ಮಂಜೇಶ್ವರದಿಂದ ತ್ರಿಕರಿಪುರದವರೆಗಿನ ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ಕೋಟ್ಯಂತರ ಮೌಲ್ಯದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್, ಎನ್‍ಎಚ್‍ಎಂ ಮತ್ತು ನಬಾರ್ಡ್ ನಿಧಿಗಳ ಸರಿಯಾದ ಬಳಕೆಯಿಂದ ಈ ಬದಲಾವಣೆಗಳು ಸಾಧ್ಯವಾಗಿದೆ.
ವೈದ್ಯಕೀಯ ಕಾಲೇಜು ಪ್ರತಿಭಟನೆಯ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಎಡಪಂಥೀಯ ಗುಂಪುಗಳು ಶಾಸಕರ ವಿರುದ್ಧ ಆರೋಪಗಳನ್ನು ಹೊರಿಸುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಈ ವಿವರಣೆ ನೀಡಿದ್ದಾರೆ. ಯುಡಿಎಫ್ ವ್ಯರ್ಥವಾಗಿ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಎಲ್‍ಡಿಎಫ್, ಅಂಕಿಅಂಶಗಳನ್ನು ಒದಗಿಸುವ ಮೂಲಕ ಪ್ರತಿಭಟನೆಯನ್ನು ಸಮರ್ಥಿಸಿಕೊಳ್ಳುತ್ತಿದೆ.



