ಕುಂಬಳೆ: ಕೇರಳದ ತೀಯಾ ಸಮಾಜವನ್ನು ಕೇರಳ ಸರ್ಕಾರ ದಶಕಗಳಿಂದ ನಿರ್ಲಕ್ಷಿಸುವ ಹಿನ್ನೆಲೆಯಲ್ಲಿ ಈಳವರಿಂದ ಪ್ರತ್ಯೇಕಿಸಿ ತೀಯ ಸಮಾಜವನ್ನು ಪ್ರತ್ಯೇಕ ಜಾತಿಯಾಗಿ ನೋಂದಾಯಿಸಬೇಕು ಮತ್ತು ಕೇರಳ ರಾಜಕೀಯದಲ್ಲಿ ಮಲಬಾರಿನಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳನ್ನು ತೀಯಾ ಸಮುದಾಯಕ್ಕೆ ಮೀಸಲಿರಿಸಬೇಕೆಂಬ ಬೇಡಿಕೆಯೊಂದಿಗೆ ತೀಯಾ ಕ್ಷೇಮ ಸಭಾ ಹೋರಾಟಕ್ಕಿಳಿದಿದೆ. ಇದರಂಗವಾದ ಹಕ್ಕು ಸಂರಕ್ಷಣಾ ಉತ್ತರ ವಲಯ ವಾಹನ ಪ್ರಚಾರ ಯಾತ್ರೆ ಜ. 25 ರಂದು ಬೆಳಿಗ್ಗೆ ಕುಂಬಳೆಯಿಂದ ಆರಂಭಗೊಂಡಿತು. ಕುಂಬಳೆ ಶ್ರೀ ಸದ್ಗುರು ನಿತ್ಯಾನಂದ ಮಠದಲ್ಲಿ ವಿಶೇಷ ಪೂಜಾ ಸಂಕಲ್ಪಗಳಿಂದ ಪ್ರಾರ್ಥನೆ ಸಲ್ಲಿಸಿ ಹೊರಟ ಪ್ರಚಾರ ಯಾತ್ರೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಧ್ವಜ ಹಸ್ತಾಂತರಿಸಿ ಉದ್ಘಾಟಿಸಿದರು. ತೀಯ ಕ್ಷೇಮ ಸಭಾ ಕೇರಳ ರಾಜ್ಯಾಧ್ಯಕ್ಷ ರವಿ ಕುಳಂಗರ ನೇತೃತ್ವದಲ್ಲಿ ಯಾತ್ರೆ ನಡೆಯುತ್ತಿದೆ.
ತೀಯ ಸಮುದಾಯಕ್ಕೆ ಅರ್ಹವಾದ ಸೌಲಭ್ಯಗಳನ್ನು ಕಸಿದು ತೆಗೆಯಲಿಗಿದ್ದು, ಅದನ್ನು ಮರಳಿ ಪಡೆಯುವುದರೊಂದಿಗೆ ಮಲಬಾರಿನ ತೀಯರನ್ನು ಪ್ರತ್ಯೇಕ ಜನಾಂಗವಾಗಿ ಅಂಗೀಕರಿಸಬೇಕೆಂದು ಅವರು ಒತ್ತಾಯಿಸಿದರು. ತೀಯ ಸಮಾಜದ ಆರಾಧನಾ ಕ್ಷೇತ್ರಗಳನ್ನು ಸಂರಕ್ಷಿಸಬೇಕು, ಆಚಾರನುಷ್ಟಾನ ಪಾಲಕರಿಗೆ ಗೌರವಧನ ನೀಡಬೇಕು ಮುಂತಾದ ಬೇಡಿಕೆಯೊಂದಿಗೆ ಮಲಬಾರಿನಲ್ಲಿ ವಿಘಟಿತರಾದ ತೀಯಾ ಸಮಾಜವನ್ನು ಒಗ್ಗಡಿಸಿ ಸಂಘಟಿಸುದು ಗುರಿಯೆಂದು ಅವರು ಹೇಳಿದರು. ಮಲಬಾರಿನ 25 ವಿಧಾನಸಭಾ ಕ್ಷೇತ್ರಗಳಲ್ಲಿ ತೀಯ ಸಮಾಜ ನಿರ್ಣಾಯಕ ಶಕ್ತಿಯಾಗಿದ್ದು, ಸಮಾಜ ಸಂಘಟಿತ ರಾಜಕೀಯ ಶಕ್ತಿಯಾದರೆ ಮಾತ್ರವೇ ಸರಕಾರ ನಮ್ಮ ಬೇಡಿಕೆಗೆ ಮಣಿಯಲಿದೆ ಎಂದವರು ತಿಳಿಸಿದರು.
ತೀಯ ಕ್ಷೇಮ ಸಭಾ ಮುಂದಾಳುಗಳಾದ ರಾಘವನ್ ಪಣಿಕ್ಕರ್, ನಾರಾಯಣನ್ ಮಯ್ಯಿಲ್, ರಾಜೀವನ್ ಪಳ್ಳಿಕಂಡಿ, ಚಂದ್ರನ್ ಆರಂಗಾಡಿ, ಕೆ. ಡಿ. ಪಿ. ನಾಯಕ ನ್ಯಾಯವಾದಿ ಬಶೀರ್ ಆಲಡಿ, ಸತೀಶನ್ ಕೂವತೊಟ್ಟಿ, ನಾಗೇಶ್ ಕುಂಬಳೆ ಮೊದಲಾದವರು ಮಾತನಾಡಿದರು.
ಕುಂಬಳೆಯಿಂದ ಆರಂಭಗೊಂಡ ಯಾತ್ರೆ ಮೊದಲದಿನ ಸೀತಾಂಗೋಳಿ, ಬದಿಯಡ್ಕ, ಮುಳ್ಳೇರಿಯ, ಕಾಸರಗೋಡು ಮೊದಲಾದ ಕೇಂದ್ರದಲ್ಲಿ ಸ್ವಾಗತ ಪಡೆಯಿತು. ಬಳಿಕ ಉದುಮ, ಕಾಞಂಗಾಡ್, ಪಯ್ಯನ್ನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪರ್ಯಟನೆ ನಡೆಸಿ ಜ. 28 ರಂದು ಸಂಜೆ 5ಕ್ಕೆ ತ್ರಿಕರಿಪುರದಲ್ಲಿ ಸಮಾಪ್ತಿಯಾಗಲಿದೆ.

