ಬದಿಯಡ್ಕ: ನಮ್ಮ ಪಂಚಾಯಿತಿ ಅಂದರೆ ನಮಗೆ ಅಭಿಮಾನ. ಅಲ್ಲಿ ಆರಿಸಿಬಂದಿರುವ ಜನಪ್ರತಿನಿಧಿಗಳನ್ನು ದೇವರ ಸನ್ನಿಧಿಯಲ್ಲಿ ಅಭಿನಂದಿಸುವ ಮೂಲಕ ಬಲುದೊಡ್ಡ ಕಾರ್ಯವನ್ನು ಮಾಡಿದ್ದೀರಿ. ದೇಶವು ಅಭಿವೃದ್ಧಿಪಥದಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ 25 ವರ್ಷಗಳ ನಂತರ ಬಿಜೆಪಿ ಸೋಲಿಲ್ಲದ ಸರದಾರನ ಅಧ್ಯಕ್ಷ ಪದವಿಯೊಂದಿಗೆ ಬದಿಯಡ್ಕದಲ್ಲಿ ಅಧಿಕಾರಕ್ಕೆ ಬಂದಿರುವುದು ನಮಗೆಲ್ಲ ಹೆಮ್ಮೆಯ ವಿಚಾರ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.
ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ನಮೋ ಭಕ್ತವೃಂದದ ವತಿಯಿಂದ ಜರಗಿದ ಸೇವೆ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ವಿ.ಬಿ.ಕುಳಮರ್ವ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸೇವಾ ಭಾರತಿ ಕಾಸರಗೋಡು ಜಿಲ್ಲಾ ರಕ್ಷಾಧಿಕಾರಿ ಸೂರ್ಯನಾರಾಯಣ ಭಟ್ ಪನತ್ತಡಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಕೇರಳ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಮುಂದಿನ ದಿನಗಳಲ್ಲಿ ವಿಜೇತರಾದ ಅಭ್ಯರ್ಥಿಗಳು ಉತ್ತಮ ಸಾಧನೆಯ ಮೂಲಕ ಜನಮಾನಸದಲ್ಲಿ ಸದಾ ನೆಲೆನಿಲ್ಲುವಂತಾಗಲಿ ಎಂದು ಹಾರೈಸಿದರು.
ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ., ನೀರ್ಚಾಲು ಡಿವಿಶನ್ ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಸದಸ್ಯ ಶ್ಯಾಮಪ್ರಸಾದ ಸರಳಿ, ಹರೀಶ ಎ. ಇವರನ್ನು ಅಭಿನಂದಿಸಲಾಯಿತು. ಕುಂಟಿಕಾನ ಮಠದ ಆಡಳಿತ ಮೊಕ್ತೇಸರ ಶಂಕರನಾರಾಯಣ ಭಟ್ ಕೆ.ಎಂ., ವೆಂಕಟೇಶ್ವರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ವೆಂಕಟ್ರಾಜ ವಾಶೆಮನೆ ಸ್ವಾಗತಿಸಿ, ಶ್ಯಾಮಪ್ರಸಾದ ಕುಳಮರ್ವ ವಂದಿಸಿದರು. ಸಾಮಾಜಿಕ ಧಾರ್ಮಿಕ ಸಂಘಟಕ ರಾಜೇಶ್ ಮಾಸ್ತರ್ ಅಗಲ್ಪಾಡಿ ನಿರೂಪಿಸಿದರು. ಶ್ರೀದೇವರಿಗೆ ಏಕಾದಶರುದ್ರಾಭಿಷೇಕ ಸೇವೆ, ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.




