ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಗೆ ಇನ್ನು ಕೇವಲಮೂರು ತಿಂಗಳು ಉಳಿದಿರುವಂತೆÉರಡನೇ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರದ ಕೊನೆಯ ಬಜೆಟನ್ನು ಹಣಕಾಸು ಖಾತೆ ಸಚಿವ ಕೆ.ಎನ್ ಬಾಲಗೋಪಾಲನ್ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದರು.
ಬಜೆಟನ್ನು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿರುವ ಎಲ್ಡರ್ಲಿ ಬಜೆಟ್ ಎಂದು ಬಣ್ಣಿಸಿರುವ ಬಾಲಗೋಪಾಲನ್ ಅವರು, ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಹಲವಾರು ಯೋಜನೆಗಳನ್ನು ಬಜೆಟ್‍ನಲ್ಲಿ ಅಳವಡಿಸಿಕೊಂಡಿದ್ದಾರೆ. ಪ್ರತಿ ಬಾರಿ ಕಾಸರಗೋಡನ್ನು ನಿರ್ಲಕ್ಷಿಸುತ್ತಿದ್ದ ಬಜೆಟ್‍ನಲ್ಲಿ ಈ ಬಾರಿ ಕಾಸರಗೋಡು ಪ್ಯಾಕೇಜ್ ಅನ್ವಯ 80ಕೋಟಿ ರೂ. ಮೀಸಲಿರಿಸಲಾಗಿದೆ. ರಾಜ್ಯಾದ್ಯಂತ ಆಟೋರಿಕ್ಷಾ ನಿಲ್ದಾಣಗಳನ್ನು ಸ್ಮಾಟ್ ಮೈಕ್ರೋ ಹಬ್‍ಗಳನ್ನಾಗಿಸುವ ಯೋಜನೆ ಬಜೆಟ್‍ನಲ್ಲಿ ಅಳವಡಿಸಿಕೊಳ್ಳಲಾಗಿದೆ.
2026-27ನೇ ವರ್ಷದಲ್ಲಿ ಕಲ್ಯಾಣ ಪಿಂಚಣಿ ವಿತರಣೆಗಾಗಿ 14500ಕೋಟಿ ರೂ. ಮೀಸಲಿರಿಸಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪ್ರೀಪ್ರೈಮರಿ ಶಾಲಾ ಅಧ್ಯಾಪಕರು, ಸಾಕ್ಷರತಾ ಪ್ರೇರಕ್‍ಗಳ ಗೌರವಧನವನ್ನು ಮಾಸಿಕ ಒಂದು ಸಾವಿರ ರೂ. ಹಾಗೂ ಅಂಗನವಾಡಿ ಸಹಾಯಕಿಯರ ಗೌರವಧನ 500ರೂ. ಹೆಚ್ಚಿಸಲಾಗಿದೆ. ಶಾಲಾ ಅಡುಗೆ ಕಾರ್ಮಿಕರ ವೇತನದಲ್ಲಿ ದೈನಂದಿನ 25ರೂ. ಏರಿಕೆ ಮಾಡಲಾಗಿದೆ. ಇನ್ನು ಒಂದರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಅಪಘಾತ ವಿಮಾ ಯೋಜನೆಯನ್ನುಜಾರಿಗೊಳಿಸಲಾಗಿದೆ. ಗ್ರಾಮಗಳಲ್ಲಿ ಸಕ್ರಿಯವಾಗಿ ಚಟುವಟಿಕೆ ನಡೆಸುತ್ತಿರುವ ಯುವಜನ ಕ್ಲಬ್ ಚಟುವಟಿಕೆಗೆ ಪೂರಕವಾಗಿ 5ಕೋಟಿ ರೂ.ಮೀಸಲಿರಿಸಲಾಗಿದೆ.
ಕೆ.ಎನ್ ಬಾಲಗೋಪಾಲನ್ ಮಂಡಿಸಿದ ಬಜೆಟ್ ಚುನಾವಣಾ ಗಿಮಿಕ್ ಆಗಿದ್ದು, ಕೇವಲ ಭರವಸೆಗಳನ್ನು ತುರುಕಲಾಗಿದೆ ಎಂದು ಪ್ರತಿಪಕ್ಷ ನೇತಾರ ವಿ.ಡಿ ಸತೀಶನ್ ಆರೋಪಿಸಿದ್ದಾರೆ.

