ಕಾಸರಗೋಡು: ಅನಂತಪುರಂ ಕೈಗಾರಿಕಾ ಎಸ್ಟೇಟ್‍ನಲ್ಲಿರುವ ರೆಡ್ ಪೋರ್ಟ್ ಪಟಾಕಿ ತಯಾರಿಕಾ ಘಟಕದಲ್ಲಿ ಸೋಮವಾರ ಬೆಳಿಗ್ಗೆ ಭಾರಿ ಸ್ಫೋಟ ಸಂಭವಿಸಿದೆ. ಅವಘಡದಲ್ಲಿ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಪಟಾಕಿ ತಯಾರಿಕಾ ಘಟಕದಲ್ಲಿನ ಮಿಕ್ಸಿಂಗ್ ಯೂನಿಟ್ ಶೆಡ್ ಸ್ಫೋಟದಲ್ಲಿ ಸಂಪೂರ್ಣವಾಗಿ ನಾಶವಾಗಿದೆ.
ಕೆಲಸದಲ್ಲಿದ್ದ ಶಿವಕಾಶಿ ಮೂಲದ ಶಂಕರ್ ಮತ್ತು ಕರುಪ್ಪುಸಾಮಿ ಗಾಯಗೊಂಡಿದ್ದಾರೆ. ಸ್ಫೋಟದ ನಂತರ ಅವರು ತಕ್ಷಣ ಹೊರಗೆ ಹಾರಿದ್ದರಿಂದ ಗಾಯಗಳು ಗಂಭೀರವಾಗಿಲ್ಲ. ಕಾರ್ಖಾನೆಯಲ್ಲಿ ಸುಮಾರು ಇಪ್ಪತ್ತೈದು ಶೆಡ್‍ಗಳಿವೆ, ಅವುಗಳಲ್ಲಿ ಮಿಕ್ಸಿಂಗ್ ಯೂನಿಟ್, ಕಚ್ಚಾ ವಸ್ತುಗಳ ಸಂಗ್ರಹಣಾ ಸೌಲಭ್ಯ ಮತ್ತು ಫಿನಿಶಿಂಗ್ ಶೆಡ್ ಸೇರಿವೆ.
ಹೊರಗೆ ರಾಶಿ ಹಾಕಲಾಗಿದ್ದ ಕಸದಿಂದ ಹರಡಿದ ಬೆಂಕಿಯಿಂದ ಸ್ಫೋಟ ಸಂಭವಿಸಿದೆ ಎಂದು ನಂಬಲಾಗಿದೆ. ಅವಘಡ ಸಂಭವಿಸಿದ ಯಾವುದೇ ಶೆಡ್‍ಗಳಲ್ಲಿ ಪ್ರಾಥಮಿಕ ಅಗ್ನಿಶಾಮಕ ಸುರಕ್ಷತಾ ಸಾಧನಗಗಳು ಇದ್ದಿರಲಿಲ್ಲ. ಈ ಪಟಾಕಿ ಉತ್ಪಾದನಾ ಘಟಕವು ಅಗ್ನಿಶಾಮಕ ಇಲಾಖೆಯ ಮಾನದಂಡ ಪ್ರಮಾಣ ಪತ್ರ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು ಎಂದು ಕಂಡುಬಂದಿದೆ. ಇಲ್ಲಿ ಸಂಗ್ರಹಿಸಲಾದ ನಿಖರವಾದ ಪ್ರಮಾಣದ ಮದ್ದುಗುಂಡುಗಳು ಎಷಟೆಂಬ ಬಗ್ಗೆ ದಾಖಲೆಗಳೂ ಲಭ್ಯವಿಲ್ಲ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮೂಸಾ ವಡಕ್ಕೆತ್ತಿಲ್ ನೇತೃತ್ವದಲ್ಲಿ ಕಾಸರಗೋಡು ಮತ್ತು ಉಪ್ಪಳ ಠಾಣೆಗಳ ನಾಲ್ಕು ಯೂನಿಟ್ ಅಗ್ನಿಶಾಮಕ ದಳಗಳು ಬೆಂಕಿಯನ್ನು ನಂದಿಸಿದವು. ಅನಂತಪುರಂ ಮೂಲದ ಪಿ ಮಹಮ್ಮದ್ ಕುಂಞÂ ಎಂಬುವರು ಈ ಸಂಸ್ಥೆಯ ಮಾಲೀಕರಾಗಿದ್ದಾರೆ. ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾಧಿಕಾರಿ ಎಂ.ರಫೀಕ್, ಅಗ್ನಿಶಾಮಕ ಮತ್ತು ರಕ್ಷಣಾಧಿಕಾರಿಗಳಾದ ಟಿ.ಅಮಲರಾಜ್, ಎಸ್.ಅಭಿಲಾಷ್, ವಿ.ಕೆ.ಶೈಜು, ರಾಜೇಶ್ ಪಾವೂರು, ಟಿ.ಎಸ್.ಶರಣ್, ಎಸ್.ಮಹಮ್ಮದ್ ಶಫಿ, ಟಿ.ಎಸ್.ಮುರಳೀಧರನ್, ಕೆ.ವಿ.ಅಭಿಜಿತ್, ವಿ.ಮಹೇಶ್, ಬಿ.ಆರ್.ಅತುಲ್, ವಿ.ಎಸ್.ಶ್ರೀಜಿತ್, ಗೃಹರಕ್ಷಕರಾದ ಸುಭಾಷ್, ಪ್ರದೀಪ್, ರತೀಶ್ ಮತ್ತಿತರ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿದ್ದರು.




