ಈ ನಿರ್ಧಾರದಿಂದ ಪಾನ್ ಅಂಗಡಿಗಳಲ್ಲಿನ ದೃಶ್ಯವೇ ಬದಲಾಗಲಿದೆ.
ಈ ನಿಷೇಧವು ಹೊಸ ಉತ್ಪನ್ನಗಳಿಗೆ ಮಾತ್ರವಲ್ಲ, ಈಗಾಗಲೇ ಅಂಗಡಿಗಳಲ್ಲಿ ಇರುವ ಹಳೆಯ ದಾಸ್ತಾನಿಗೂ ಅನ್ವಯಿಸುತ್ತದೆ. ನಿಷೇಧ ಜಾರಿಗೆ ಬಂದ ನಂತರ ಯಾವುದೇ ರೀತಿಯ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದರಿಂದಾಗಿ ಅಂಗಡಿಯವರಲ್ಲಿ ಗೊಂದಲ ಮತ್ತು ಆತಂಕ ಉಂಟಾಗಿದೆ.
ಜನವರಿ 21 ರಂದು ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಒಡಿಶಾ ಸರ್ಕಾರ ಹೊರಡಿಸಿದೆ. ಸುಪ್ರೀಂ ಕೋರ್ಟ್ ನಿರ್ದೇಶನಗಳು ಮತ್ತು FSSAI ಮಾರ್ಗಸೂಚಿಗಳನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಹಾರ ಸುರಕ್ಷತೆ ದೃಷ್ಟಿಯಿಂದ ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಪದಾರ್ಥಗಳು ಅತ್ಯಂತ ಅಪಾಯಕಾರಿ ಎಂದು ಸರ್ಕಾರ ಹೇಳಿದೆ.
ಪ್ರತ್ಯೇಕವಾಗಿ ಮಾರಾಟ ಮಾಡಿ ನಂತರ ಒಟ್ಟಿಗೆ ಸೇವಿಸುವ ಆಹಾರ ಪದಾರ್ಥಗಳನ್ನೂ ಕಾನೂನುಬಾಹಿರವೆಂದು ಘೋಷಿಸಲಾಗಿದೆ. ತಂಬಾಕು ಅಥವಾ ನಿಕೋಟಿನ್‌ನ್ನು ಬೆರೆಸಿದ ಯಾವುದೇ ಆಹಾರ ಪದಾರ್ಥಗಳನ್ನು ಈಗ ಮಾರಾಟ ಮಾಡುವಂತಿಲ್ಲ. ಇದರಿಂದ ಪಾನ್ ಮಸಾಲಾ ಮತ್ತು ತಂಬಾಕು ಸಂಯೋಜನೆಯ ಮಾರಾಟಕ್ಕೂ ಬ್ರೇಕ್ ಬಿದ್ದಿದೆ.
ನಿಷೇಧದ ನಂತರ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದೂ ಅಪರಾಧವಾಗುತ್ತದೆ. ಅಂದರೆ, ಹಳೆಯ ದಾಸ್ತಾನನ್ನು ಇಟ್ಟುಕೊಳ್ಳುವಂತಿಲ್ಲ. ಮಾರಾಟ ಮಾತ್ರವಲ್ಲ, ಸಂಗ್ರಹಣೆಯ ಮೇಲೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದೆ.
ಅಂಕಿಅಂಶಗಳ ಪ್ರಕಾರ, ಒಡಿಶಾದಲ್ಲಿ ಶೇ.42 ಕ್ಕಿಂತ ಹೆಚ್ಚು ವಯಸ್ಕರು ಹೊಗೆರಹಿತ ತಂಬಾಕು ಸೇವಿಸುತ್ತಿದ್ದಾರೆ. ಇದು ರಾಷ್ಟ್ರೀಯ ಸರಾಸರಿಗಿಂತ ಎರಡು ಪಟ್ಟು ಹೆಚ್ಚು. ಮಕ್ಕಳೂ ಯುವಕರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಚಟಕ್ಕೆ ಒಳಗಾಗುತ್ತಿರುವುದು ಸರ್ಕಾರದ ಕಾಳಜಿಗೆ ಕಾರಣವಾಗಿದೆ. ಈ ನಿಷೇಧವು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಮಹತ್ವದ ಹೆಜ್ಜೆಯೆಂದು ಪರಿಗಣಿಸಲಾಗಿದೆ.

