ಕಾಸರಗೋಡು: ದೇಶದ ವಿವಿಧ ಕಲಾಪ್ರಕಾರಗಳು ರಾಷ್ಟ್ರೀಯ ಭಾವೈಕ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿರುವುದಾಗಿ ಹಿರಿಯ ಧಾರ್ಮಿಕ ಮುಂದಾಳು ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ತಿಳಿಸಿದ್ದಾರೆ. ಅವರು ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಾಲಯದ ಶ್ರೀ ವ್ಯಾಸಮಂಟಪದಲ್ಲಿ ಕಾಸರಗೋಡು ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾಸಂಘದ ಸಂಪೂರ್ಣ ಸಹಕಾರದೊಂದಿಗೆ ಗಣರಾಜ್ಯೋತ್ಸವ ಆಚರಣೆ ಅಂಗವಾಗಿ ಮಾಣಿಲ ಶ್ರೀ ಮಹಾಲಕ್ಷ್ಮಿ ಯಕ್ಷಗಾನ ಕಲಾ ಮಂಡಳಿ ವತಿಯಿಂದ ಆಯೋಜಿಸಲಾದ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಮಾಣಿಲ ಮೇಳದ ವ್ಯವಸ್ಥಾಪಕ ಡಾ.ಸತೀಶ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸಿದ್ದರು. ವೈದಿಕ ವಿದ್ವಾಂಸ ವೇದಮೂರ್ತಿ ನಾಗೇಂದ್ರ ಭಟ್ ಕೂಡ್ಲು ಪ್ರಧಾನ ಭಾಷಣ ಮಾಡಿದರು. ಮಧೂರು ದೇವಾಲಯದ ಪ್ರಧಾನ ಅರ್ಚಕ ಡಾ.ಪಿ.ಕೆ.ಧನಂಜಯ ಕೇಕುಣ್ಣಾಯ, ಹಿರಿಯ ಉದ್ಯಮಿ ರಾಮಪ್ರಸಾದ್ ಕಾಸರಗೋಡು, ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಕೆ.ಶಶಿಧರ ಶೆಟ್ಟಿ, ಕಾಸರಗೋಡು ಕನ್ನಡಿಗರು ಬಳಗದ ರೂವಾರಿ ಜಯನಾರಾಯಣ ತಾಯನ್ನೂರು ಉಪಸ್ಥಿತರಿದ್ದರು.
ಕೆ.ಎನ್.ರಾಮಕೃಷ್ಣ ಹೊಳ್ಳ ಸ್ವಾಗತಿಸಿದರು. ಪತ್ರಕರ್ತ ವೀಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಕುಮಾರ್ ವಂದಿಸಿದರು. ಮಾಣಿಲ ಮೇಳದಿಂದ "ಬೇಡರ ಕಣ್ಣಪ್ಪ" ಯಕ್ಷಗಾನ ಪ್ರದರ್ಶನ ನಡೆಯಿತು.


