ಕಾಸರಗೋಡು: ದೇಶದ ಜನಸಾಮಾನ್ಯರನ್ನು ಕೇಂದ್ರ ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನಾಗಿಸಲು ಬಿಜೆಪಿ ಮಹಿಳಾ ಮೋರ್ಛ ಕಾರ್ಯಕರ್ತರು ರಂಗಕ್ಕಿಳಿದು ಕಾರ್ಯಪ್ರವೃತ್ತರಾಗಬೇಕು ಹಾಗೂ ಕೇಂದ್ರ ಯೋಜನೆಗಳ ಪ್ರಚಾರಕರಾಗಬೇಕು ಎಂದು ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ನವ್ಯಾ ಹರಿದಾಸ್ ತಿಳಿಸಿದ್ದಾರೆ. ಅವರು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಕಾಸರಗೋಡು ಜಿಲ್ಲಾಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಸಂಗಮ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಸಬಲೀಕರಣ ಮತ್ತು ಮಹಿಳಾ ಸಶಸ್ತ್ರೀಕರಣ ವಿಷಯದಲ್ಲಿ ಉಳಿದ ಪಕ್ಷಗಳೆಲ್ಲ ಕೇವಲ ಬೂಟಾಟಿಕೆಯ ಮಾತನ್ನಾಡುತ್ತಿದ್ದರೆ ಬಿಜೆಪಿ ಚುನಾವಣೆಯಲ್ಲಿ ಮಹಿಳೆಯರಿಗೆ ಅತ್ಯಧಿಕ ಅವಕಾಶಗಳನ್ನೊದಗಿಸಿ ಮಾದರಿಯಾಗಿದೆ. ಕೇರಳಾದ್ಯಂತ ಬಿಜೆಪಿ ಶಕ್ತಿ ಸಂವರ್ಧಿಸಿಕೊಂಡಿದ್ದು, ಕೇಂದ್ರಗೃಹ ಸಚಿವ ಅಮಿತ್ ಷಾ ಅವರು ಕೇರಳದಲ್ಲಿ ಶಾಸಕರನ್ನು ಗೆಲ್ಲಿಸಿಕೊಡುವ 'ಮಿಷನ್-2026'ಗುರಿಯೊಂದನ್ನು ಬಿಜೆಪಿಗೆ ನೀಡಿದ್ದು, ಈ ಗುರಿ ಸಾಧನೆಗೆ ವಿಶೇಷವಾಗಿ ಮಹಿಳೆಯರು ಪಣತೊಡಬೇಕು. ಇದಕ್ಕಾಗಿ ಮಹಿಳೆಯರು ಪೂರ್ಣಾವಧಿ ಕಾರ್ಯಕರ್ತರಾಗಿ ರಂಗಕ್ಕಿಳಿಯಬೇಕು ಎಂದು ತಿಳಿಸಿದರು.
ಈ ಸಂದರ್ಭ ಸ್ಥಳೀಯಾಡಳಿತ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಎಲ್ಲಾ ಮಹಿಳಾ ಸದಸ್ಯರನ್ನು ಸಮಾರಂಭಧಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಅಭಿನಂಧಿಸಿದರು. ಮಹಿಳಾ ಮೋರ್ಛಾ ಜಿಲ್ಲಾ ಅಧ್ಯಕ್ಷೆ ಕೆ. ಎಸ್. ರಮಣಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲ್, ಅಶ್ವಿನಿ ಕೆ. ಎಂ, ಜಿಲ್ಲಾ ಕೋಶಾಧಿಕಾರಿವೀಣಾ ಅರುಣ್ ಶೆಟ್ಟಿ, ಉದುಮ ಮಂಡಲಾಧ್ಯಕ್ಷೆ ಶೈನಿಮೋಳ್, ಕಾಸರಗೋಡು ಮಂಡಲ ಉಪಾಧ್ಯಕ್ಷೆ ಲೀಲಾವತಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರ. ಕಾರ್ಯದರ್ಶಿ ಅನಿತಾ ನಾಯ್ಕ್, ಪ್ರೇಮಲತಾ, ಶ್ರೀಲತಾ ಮೊದಲಾದವರು ಉಪಸ್ಥಿತರಿದ್ದರು.


