ಜೈಪುರ: ಭಾರತೀಯ ಸೇನೆಯು ಭವಿಷ್ಯದಲ್ಲಿನ ಯುದ್ಧಗಳಿಗೆ ಸನ್ನದ್ಧಗೊಳ್ಳುತ್ತಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಗುರುವಾರ ಹೇಳಿದ್ದಾರೆ.
ನಾವು ಸ್ವದೇಶಿ ನಿರ್ಮಿತ ಯುದ್ಧೋಪಕರಣಗಳನ್ನು ಹೊಂದುವುದು ಅಗತ್ಯವಾಗಿದ್ದು ಇದು ನಮ್ಮ ಕಾರ್ಯತಂತ್ರದ ಅನಿವಾರ್ಯತೆಯೂ ಹೌದು ಎಂದು ಉಪೇಂದ್ರ ದ್ವಿವೇದಿ ಅಭಿಪ್ರಾಯಪಟ್ಟರು.
ಉತ್ತರಾಯಣ ದಿನವಾದ ಗುರುವಾರ ಇಲ್ಲಿ ನಡೆದ ಸೇನಾ ದಿನದ ಪಥಸಂಚಲನದಲ್ಲಿ ಭಾಗವಹಿಸಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಭಾರತೀಯ ಸೇನೆಯು ಅತ್ಯಾದುನಿಕ ಯುದ್ಧ ಸಾಮಗ್ರಿಗಳು, ಸುಸಜ್ಜಿತ ಸೈನಿಕರು, ಏಕೀಕೃತ ಕಾರ್ಯಾಚರಣೆ ಸಾಮರ್ಥ್ಯವನ್ನು ಒಳಗೊಂಡಿದೆ. ಇದರ ಭಾಗವಾಗಿ ಯೋಧರನ್ನು ಮತ್ತಷ್ಟು ಸಮರ್ಥಗೊಳಿಸಲು ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ನಾವು ಸದ್ಯದ ಸವಾಲನ್ನು ಮಾತ್ರ ಎದುರಿಸುತ್ತಿಲ್ಲ. ಭವಿಷ್ಯದ ಯುದ್ಧಗಳಿಗೂ ಸಜ್ಜಾಗುತ್ತಿದ್ದೇವೆ. ಸಶಸ್ತ್ರೀಕರಣ ಮತ್ತು ತರಬೇತಿ ಸೇರಿದಂತೆ ಭವಿಷ್ಯದ ಅಗತ್ಯಕ್ಕೆ ತಕ್ಕಂತೆ ಸೇನೆಯಲ್ಲಿ ರಚನಾತ್ಮಕ ಬದಲಾವಣೆಗಳಾಗುತ್ತಿವೆ ಎಂದರು.
ಯಾವುದೇ ಸಮಯದಲ್ಲಾದರೂ, ಯಾವುದೇ ದಾಳಿಯನ್ನು ಎದುರಿಸಲು ಸೇನೆ ಸದಾ ಸನ್ನದ್ಧವಾಗಿರುತ್ತದೆ. ಈಗಾಗಲೇ ರಾಷ್ಟ್ರೀಯ ಪಥಸಂಚಲನದಲ್ಲಿ ನಮ್ಮ ಶಕ್ತಿ ಅನಾವರಣಗೊಂಡಿದೆ. ಇಂತಹ ಪೂರ್ವ ಸಿದ್ಧತೆಗಳು ನಿರಂತವಾಗಿ ನಡೆಯುತ್ತಿರುತ್ತವೆ. ಇಲ್ಲಿ ತಯಾರಿಸಿದ ಯುದ್ಧೋಪಕರಣಗಳು ನಮ್ಮ ಸ್ವದೇಶೀಕರಣವನ್ನು ಅನಾವರಣಗೊಳಿಸಿವೆ ಎಂದು ಉಪೇಂದ್ರ ದ್ವಿವೇದಿ ಹೇಳಿದರು.

