ಬದಿಯಡ್ಕ: ಗಲ್ಫ್ ಉದ್ಯೋಗಿಯ ಪತ್ನಿಗೆ ವಿವಾಹ ಭರವಸೆಯೊಡ್ಡಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನೀರ್ಚಾಲು ಬೀಜಂತ್ತಡ್ಕನಿವಾಸಿ, ಮೀನುಮಾರಾಟಗಾರ ಅಬ್ದುಲ್ ಖಾದರ್ ಎಂಬಾತನನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪೊಲೀಸ್ ಠಾಣೆ ವ್ಯಾಪ್ತಿಯ 38ರ ಹರೆಯದ ಗೃಹಿಣಿ ನೀಡಿದ ದೂರಿನನ್ವಯ ಈ ಬಂಧನ ನಡೆದಿದೆ. 2025ರ ಆ.1ರಿಂದ ಅಬ್ದುಲ್ ಖಾದರ್ ಹಲವು ಬಾರಿ ಕಿರುಕುಳ ನೀಡಿದ್ದು, ಈ ದೃಶ್ಯಗಳನ್ನು ಮೊಬೈಲಲ್ಲಿ ಸೆರೆಹಿಡಿದು,ನಂತರ ಈ ದೃಶ್ಯಗಳನ್ನು ಪತಿಗೆ ಕಳುಹಿಸಿಕೊಡುವುದಾಗಿ ಬ್ಲ್ಯಾಕ್‍ಮೇಲ್ ಮಾಡುತ್ತಾ ಬಂದಿದ್ದಾನೆ. ಆರಂಭದಲ್ಲಿ ವಿವಾಹದ ಭರವಸೆ ನೀಡಿ ಕಿರುಕುಳನೀಡಿರುವ ಈತ, ನಂತರ ಭರವಸೆಯಿಂದ ಹಿಂದೆ ಸರಿದಿರುವುದಲ್ಲದೆ, ಬ್ಲ್ಯಾಕ್‍ಮೇಲ್ ತಂತ್ರದ ಮೂಲಕ ಬೆದರಿಕೆಯೊಡ್ಡುತ್ತಾ ಬಂದಿರುವುದಾಗಿ ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

