ಪತ್ತನಂತಿಟ್ಟ: ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಚ್ಚಾಟಿತ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಪಾಲಕ್ಕಾಡ್‌ನ ಹೋಟೆಲ್‌ನಲ್ಲಿ ತಂಗಿದ್ದ ರಾಹುಲ್ ಅವರನ್ನು ಶನಿವಾರ ಮಧ್ಯರಾತ್ರಿ ವಶಕ್ಕೆ ಪಡೆದು ಪತನಂತಿಟ್ಟಕ್ಕೆ ಕರೆತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತ್ತನಂತಿಟ್ಟ ಜಿಲ್ಲೆಯ ಸ್ಥಳೀಯರೊಬ್ಬರು ಸಲ್ಲಿಸಿದ ದೂರಿನ ಮೇರೆಗೆ ಇತ್ತೀಚೆಗೆ ಪಾಲಕ್ಕಾಡ್ ಶಾಸಕರ ವಿರುದ್ಧ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ರಾಹುಲ್ ವಿರುದ್ಧ ಇದೇ ರೀತಿಯ ಎರಡು ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಇತ್ತೀಚಿನ ಪ್ರಕರಣದ ತನಿಖೆಯನ್ನು ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತನ್ನ ಮದುವೆಯಾಗುವುದಾಗಿ ಭರವಸೆ ನೀಡಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಗರ್ಭಪಾತ ಮಾಡಿಸುವಂತೆ ಒತ್ತಾಯಿಸಿದ್ದಾರೆ ಎಂದು ರಾಹುಲ್ ವಿರುದ್ಧ ಮಹಿಳೆಯೊಬ್ಬರು ಆರೋಪಿಸಿದ್ದರು. ಮತ್ತೊಂದು ಪ್ರಕರಣದಲ್ಲಿ ಮದುವೆಯಾಗುವ ಭರವಸೆ ನೀಡಿ, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬೆಂಗಳೂರಿನ ಮಹಿಳೆಯೊಬ್ಬರು ದೂರಿದ್ದರು.
ಮೊದಲ ಪ್ರಕರಣದಲ್ಲಿ ರಾಹುಲ್ ಅವರಿಗೆ ಕೇರಳ ಹೈಕೋರ್ಟ್ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು. ಎರಡನೇ ಪ್ರಕರಣದಲ್ಲಿ ತಿರುವನಂತಪುರದ ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿತ್ತು.
ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬಂದ ಬೆನ್ನಲ್ಲೇ ರಾಹುಲ್ ಅವರನ್ನು ಕಾಂಗ್ರೆಸ್ ಉಚ್ಚಾಟಿಸಿತ್ತು.

