ಬೆಂಗಳೂರು: ಬೆಂಗಳೂರಿನಲ್ಲಿ ಪರಭಾಷಿಕರು ಹೆಚ್ಚಾಗುತ್ತಿದ್ದಾರೆ ಎನ್ನುವ ಚರ್ಚೆಗಳ ನಡುವೆ, ಬೆಂಗಳೂರಿನಿಂದ ನಾವೆಲ್ಲರೂ ಹೋದರೆ ಈ ನಗರ ಶೂನ್ಯವಾಗಲಿದೆ ಎಂದು ಕೇರಳ ಮೂಲದ ವ್ಯಕ್ತಿ ಮಾಡಿರುವ ಟ್ವೀಟ್ ಕನ್ನಡಿಗರಿಂದ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈಚೆಗೆ ಬೆಂಗಳೂರಿನಲ್ಲಿ ಕೇರಳ ಮೂಲದ ವಾರ್ಡನ್‌ವೊಬ್ಬರು ಕನ್ನಡ ನಿಮ್ಮ ಮನೆಯಲ್ಲಿ ಮಾತನಾಡಿ, ಇಲ್ಲಿ ಹಿಂದಿ ಎಂದು ಹೇಳಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ವಿಚಾರದಲ್ಲಿ ಕನ್ನಡಿಗರು ಹಾಗೂ ಕನ್ನಡಪರ ಹೋರಾಟಗಾರರು ಬೀದಿಗೆ ಇಳಿದು ಪ್ರತಿಭಟನೆ ಮಾಡಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಚಾರ ಚರ್ಚೆಯ ಮುನ್ನೆಲೆಗೆ ಬಂದಿದೆ.
ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಗ್ರೇಟರ್ ಕೇರಳ (Great Kerala - @GreatKerala1) ಎನ್ನುವ ಖಾತೆಯಿಂದ ನೀವು ಬೆಂಗಳೂರಿನಲ್ಲಿರುವ ಇತರ ಎಲ್ಲರನ್ನು / ಅನ್ಯರಾಜ್ಯದವರನ್ನು ಅವರವರ ರಾಜ್ಯಗಳಿಗೆ ಕಳುಹಿಸಿದರೆ, ಬೆಂಗಳೂರು ದೊಡ್ಡ ಶೂನ್ಯವಾಗಲಿದೆ. ಗಮನಿಸಿ ಬೆಂಗಳೂರಿನಲ್ಲಿ ಕೇವಲ 30% ಜನರು ಮಾತ್ರ ಕನ್ನಡಿಗರು ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್ ಇದೀಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಅಭಿಯಾನ ಶುರು ಮಾಡಿದ್ದಾರೆ.

ನೀವು ಶೂನ್ಯದ ನಂತರ ಕಸವನ್ನು ಸೇರಿಸಲು ಮರೆತಿದ್ದೀರಿ ಎಂದು ಕನ್ನಡಿಗ ಶಶಾಂಕ್ ವ್ಯಂಗ್ಯವಾಡಿದ್ದಾರೆ. ಕೇವಲ 30% ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ / ಅತಿ ಹೆಚ್ಚು ವಲಸೆ ಬಂದ ರಾಜ್ಯ / ವಿಫಲ ಆರೋಗ್ಯ ಸೇವೆಯ ರಾಜ್ಯಗಳಲ್ಲಿ ನೀವು ಡೇಟಾವನ್ನು ಹೀಗೆ ಓದುತ್ತೀರಿ/ವಿಶ್ಲೇಷಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಮನೋಜ್ ಎನ್ನುವವರು, ಸ್ಪಷ್ಟವಾಗಿ ಹೇಳಬೇಕೆಂದರೆ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬೆಂಗಳೂರು ಮತ್ತು ಕರ್ನಾಟಕವನ್ನು ಅಭಿವೃದ್ಧಿ ಮಾಡಿದರು. ಭಾರತವನ್ನು ಆಧುನೀಕರಿಸಿದರು. ಬೆಂಗಳೂರಿನಲ್ಲಿರುವ ಯಾವುದೇ ವಲಸಿಗರು "ನಾವು ಬೆಂಗಳೂರು ನಿರ್ಮಿಸಿದ್ದೇವೆ" ಎಂದು ಹೇಳುವ ಮೂಲಕ ಕೀರ್ತಿಯನ್ನು ಕುಂದಿಸಲು ಸಾಧ್ಯವಿಲ್ಲ, ನೀವು ಇಲ್ಲಿಗೆ ವಲಸೆ ಬಂದಿದ್ದು ಪ್ರಯೋಜನಗಳನ್ನು ಪಡೆಯಲು ಎಂದಿದ್ದಾರೆ.
ಮಲಯಾಳಿಗಳು ಬೆಂಗಳೂರು ಬಿಡಬೇಕು ಎನ್ನುವ ಟ್ವೀಟ್‌ಗೆ ಮಲಯಾಳಿಗಳು, ಗುಜರಾತಿಗಳು ಅಥವಾ ಮರಾಠಿಗರು ಭಾರತೀಯರಲ್ಲವೇ ಅಥವಾ ಅವರು ಶತ್ರುಗಳೇ. ನಾವೆಲ್ಲರೂ ಸಾಮೂಹಿಕವಾಗಿ ಭಾರತವನ್ನು ನಿರ್ಮಿಸುತ್ತೇವೆ. ಪ್ರಾದೇಶಿಕತೆ ಮಾತ್ರ ವಿಭಜಿಸುತ್ತದೆ. ಆದರೆ ನಾವೆಲ್ಲರೂ ನಮ್ಮ ರಾಜ್ಯ, ಸಂಸ್ಕೃತಿ ಭಾಷೆ ಇತ್ಯಾದಿಗಳ ಬಗ್ಗೆ ಹೆಮ್ಮೆ ಪಡಬೇಕು, ನಮ್ಮ ಸಹ ನಾಗರಿಕರನ್ನು ಕೀಳಾಗಿ ಕಾಣಬಾರದು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ಕನ್ನಡಿಗರ ಜನಸಂಖ್ಯೆಯು 44% ಮತ್ತು 3.5% ಮಲಯಾಳಿಗಳು ಇಲ್ಲಿದ್ದಾರೆ. ಆ 3.5% ಜನ ಇಲ್ಲಿಂದ ಹೋದರೆ ಆರ್ಥಿಕವಾಗಿ ಅಥವಾ ಬೇರೆ ರೀತಿಯಲ್ಲಿ ಯಾವುದೇ ರೀತಿಯ "ಶೂನ್ಯ" ಕ್ಕೆ ಕಾರಣವಾಗುವುದಿಲ್ಲ ಎಂದು ರಾಮ ಕೆ.ಎಸ್ ಎನ್ನುವವರು ಹೇಳಿದ್ದಾರೆ.
ಈ ಚರ್ಚೆಯ ಹಿನ್ನೆಲೆ ಏನು
ಮೊದಲಿಗೆ ಗ್ರೇಟ್ ಕೇರಳ ಎನ್ನುವ ಸೋಷಿಯಲ್ ಮೀಡಿಯಾ ಖಾತೆಯಿಂದ ಕೇರಳ ಭಾರತದಲ್ಲಿ ವಾಸಿಸಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ತಿರುವನಂತಪುರ ಮತ್ತು ಕೊಚ್ಚಿಯಂತಹ ಟಯರ್ 2 ನಗರಗಳು ಅತ್ಯುತ್ತಮವಾಗಿವೆ. ಗುಜರಾತ್, ಮಹಾರಾಷ್ಟ್ರ ಅಥವಾ ತಮಿಳುನಾಡಿನ ದ್ವೇಷಿಗಳು ಎತ್ತುವ ಪ್ರಮುಖ ವಿಷಯವೆಂದರೆ ಕೈಗಾರಿಕೀಕರಣದ ಕೊರತೆ. ಏಕೆಂದರೆ ಅವರು ಕೇರಳ ಹೊಂದಿರುವ ಇತರ ಸಕಾರಾತ್ಮಕ ಅಂಶಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಪೋಸ್ಟ್ ಮಾಡಲಾಗಿತ್ತು.
ಇದಕ್ಕೆ ಸುನೀಲ್ ಎನ್ನುವವರು ದಯವಿಟ್ಟು ಬೆಂಗಳೂರಿನಲ್ಲಿ ವಾಸಿಸುವ ಎಲ್ಲಾ ಮಲಯಾಳಿಗಳೇ, ನೀವು ನಿಮ್ಮ ಮನೆಗೆ ಹಿಂತಿರುಗಲು ಸಾಧ್ಯವಾದರೆ ಒಳ್ಳೆಯ ನಿರ್ಧಾರ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಈ ಟ್ವೀಟ್ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ವಿವಿಧ ರಾಜ್ಯಗಳ / ಭಾಷಿಕರನ್ನು ಕೆಣಕುವ ಪ್ರಯತ್ನ ಇದಾಗಿದೆ ಎಂದು ನೆಟ್ಟಿಗರು ರಿಯಾಕ್ಟ್ ಮಾಡಿದ್ದಾರೆ.
ಈ ಟ್ವೀಟ್‌ಗೆ ಹಲವು ಕನ್ನಡಿಗರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಈ ರೀತಿಯ ಟ್ವೀಟ್‌ಗಳನ್ನು ಮಾಡಿ, ಕನ್ನಡಿಗರನ್ನು ಕೆಣಕುವ ಅವಶ್ಯಕತೆ ಏನಿದೆ ಎಂದು ಕೇಳಿದ್ದಾರೆ.

