ಬದಿಯಡ್ಕ: ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರಸ್ತೆಯಲ್ಲಿ ಸೋಮವಾರ ಖಾಸಗಿ ಬಸ್ ಗಳು ಸಂಚಾರ ಮೊಟಕುಗೊಳಿಸಿದ್ದು ಇದರಿಂದ ಪ್ರಯಾಣಿಕರು ಭಾರೀ ಸಮಸ್ಯೆಗೀಡಾದರು. ಎಂದಿನಂತೆ ಕಾಸರಗೋಡು ಹಾಗೂ ಕಲ್ಲಡ್ಕ ಭಾಗಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ತಲುಪಿದ ಪ್ರಯಾಣಿಕರು ಬಸ್‍ಗಳಿಲ್ಲದುದರಿಂದ ಸಂಕಷ್ಟಕ್ಕೀಡಾದರು. ಈ ರೂಟ್‍ನಲ್ಲಿ ಕೆಲವು ಸಾರಿಗೆ ಬಸ್‍ಗಳು ಸಂಚರಿಸುತ್ತಿವೆಯಾದರೂ ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದರಿಂದ ಬಸ್ ಏರಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ.
ಚೆರ್ಕಳ-ಕಲ್ಲಡ್ಕ ಅಂತರ್ ರಾಜ್ಯ ಮಾರ್ಗದಲ್ಲಿ ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ರಸ್ತೆ ಒಂದು ವರ್ಷದಿಂದ ಹೊಂಡಗಳಿಂದ ತುಂಬಿಕೊಂಡಿರುವುದರಿಂದ ಪ್ರಯಾಣಿಕರು ಹಾಗೂ ಬಸ್‍ಗಳು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಪ್ರೈಡ್ ಬಸ್ ಕಾರ್ಮಿಕರ ಸಂಘಟನೆ ಹಾಗೂ ನಾಗರಿಕರು ಹಲವು ಬಾರಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಆದರೆ ಇವರು ಸಲ್ಲಿಸಿದ ಮನವಿಗಳನ್ನು ಪಡೆದು ಕಡತಗಳಲ್ಲಿ ಕಟ್ಟಿಟ್ಟು ಮೂಲೆಗುಂಪಾಗಿಸುವ ಅಧಿಕಾರಿಗಳು ಅದಕ್ಕೆ ಕಾವಲು ಕುಳಿತುಕೊಂಡಿದ್ದಾರೆಂದು ದೂರಲಾಗಿದೆ.
ಈ ಮಧ್ಯೆ ರಸ್ತೆಯ ಸ್ಥಿತಿ ಅತೀ ಶೋಚನೀಯವಾದ ಹಿನ್ನೆಲೆಯಲ್ಲಿ ಸಂಚಾರ ಕಳವಳ ಮೂಡಿಸಿದೆ. ರಸ್ತೆಯನ್ನು ಸಂಚಾರಯೋಗ್ಯಗೊಳಿಸದಿದ್ದಲ್ಲಿ ಪ್ರಸ್ತುತ ರೂಟ್‍ನಲ್ಲಿ ಬಸ್ ಸಂಚಾರ ನಿಲುಗಡೆಗೊಳಿಸುವುದಾಗಿ ಬಸ್ ಕಾರ್ಮಿಕರ ಸಂಘಟನೆ ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿತ್ತು. ಆದರೂ ಅಧಿಕಾರಿಗಳ ಭಾಗದಿಂದ ಕ್ರಮ ಉಂಟಾಗಲಿಲ್ಲ. ಮುಷ್ಕರವನ್ನು ಹೊರತುಪಡಿಸಲು ಯಾವುದೇ ಚರ್ಚೆಗೂ ಕೂಡಾ ಅಧಿಕಾರಿಗಳು ಸಿದ್ಧವಾಗದ ಹಿನ್ನೆಲೆಯಲ್ಲಿ ಬಸ್ ಕಾರ್ಮಿಕರು ಈ ರೂಟ್‍ನಲ್ಲಿ ಸೋಮವಾರ ಸೂಚನಾ ಮುಷ್ಕರ ನಡೆಸಿದರು. ಬಸ್ ನೌಕರರು ಮುಷ್ಕರ ನಡೆಸಿದರೂ ಇಲ್ಲದಿದ್ದರೂ ಅಧಿಕಾರಿಗಳಿಗೆ ಯಾವುದೇ ನಷ್ಟ ಅಥವಾ ಲಾಭ ಇಲ್ಲವೆಂಬ ಭಾವನೆ ಅವರದ್ದಾಗಿದೆಯೆಂದು ಹೇಳಲಾಗುತ್ತಿದೆ. ಹಲವರಿಂದ ಕಿಫ್‍ಬಿ ಭಾರೀ ಬಡ್ಡಿಗೆ ಪಡೆದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಉಕ್ಕಿನಡ್ಕ-ಚೆರ್ಕಳ ರೀಚ್‍ನಲ್ಲ್ಲಿ ನಿರ್ಮಿಸಿದ ರಸ್ತೆ ಇದೀಗ ಶೋಚನೀಯ ಸ್ಥಿತಿಯಲ್ಲಿದೆ. ಇದೇ ವೇಳೆ ಚೆರ್ಕಳ-ಕಲ್ಲಡ್ಕ ರಸ್ತೆಯ ಉಕ್ಕಿನಡ್ಕದಿಂದ ಕಲ್ಲಡ್ಕವರೆಗಿನ ರಸ್ತೆಗೆ ಯಾವುದೇ ಹಾನಿಯಿಲ್ಲದೆ ಸುಗಮ ಸಂಚಾರ ಸಾಧ್ಯವಾಗುತ್ತಿದೆ.

.jpg)
