ಕುಂಬಳೆ: ರಾ. ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಝಕ್ಕೆ ಸಂಬಂಧಿಸಿದ ಹೈಕೋರ್ಟು ತೀರ್ಪು ನೀಡಿಕೆಯನ್ನು ಫೆ. 11ಕ್ಕೆ ಮುಂದೂಡಲಾಗಿದೆ. ಜ. 28 ರಂದು ಹೈಕೋರ್ಟು ಅಂತಿಮ ತೀರ್ಪು ನೀಡುವುದೆಂದು ಪ್ರಕಟಿಸಿತ್ತು. ಆದರೆ ರಾ. ಹೆದ್ದಾರಿ ಪ್ರಾಧಿಕಾರದ ಪರ ವಕೀಲರು ಹೈಕೋರ್ಟಿಗೆ ಹಾಜರಾಗದೇ ಇದ್ದ ಹಿನ್ನೆಲೆಯಲ್ಲಿ ಕೋರ್ಟು ಕೇಸನ್ನು ಮುಂದೂಡಿದೆ.
ಟೋಲ್ ಪ್ಲಾಝ ವಿರೋಧಿ ಕ್ರಿಯಾ ಸಮಿತಿ ಸಲ್ಲಿಸಿದ್ದ ಅರ್ಜಿಯಂತೆ ಹೈಕೋರ್ಟು ಅಂತಿಮ ತೀರ್ಪನ್ನು 28ಕ್ಕೆ ನಿಗದಿ ಪಡಿಸಿತ್ತಾದರೂ ಹೆದ್ದಾರಿ ಪರ ವಾದಿಸುವ ವಕೀಲರ ಗೈರು ಹಾಜರಿ ಕೇಸನ್ನು ಮುಂದೂಡುವಂತೆ ಮಾಡಿದೆ.
ಎರಡು ಟೋಲ್ ಪ್ಲಾಝಗಳ ನಡುವೆ ದೂರ ವ್ಯಾಪ್ತಿ 60 ಕಿ. ಮೀ. ಅಂತರ ಇರಬೇಕೆಂಬ ನಿಬಂಧನೆ ಇದ್ದರೂ ಕುಂಬಳೆಯಲ್ಲಿ ಅದನ್ನು ಉಲ್ಲಂಘಿಸಿ ತಾತ್ಕಾಲಿಕ ಎಂಬ ನೆಪದಲ್ಲಿ ಟೋಲ್ ಪ್ಲಾಝ ಸ್ಥಾಪಿಸಲಾಗಿದೆ. ಇದನ್ನು ರದ್ದುಪಡಿಸಬೇಕೆಂದು ಕೋರಿ ಕ್ರಿಯಾ ಸಮಿತಿಯ ಅಶ್ರಫ್ ಕಾರ್ಲೆ ಹೈಕೋರ್ಟಿಗೆ ದೂರು ಸಲ್ಲಿಸಿದ್ದರು. ಕೇಸನ್ನು ಪರಿಗಣಿಸಿದ್ದ ಹೈಕೋರ್ಟು ಕಳೆದವಾರ ಸೇವಾ ರಸ್ತೆ ನಿರ್ಮಿಸದೇ ಯಾಕೆ ಟೋಲ್ ಪ್ಲಾಝ ನಿರ್ಮಿಸಿ ಟೋಲ್ ವಸೂಲಿಗೆ ಇಳಿದಿರಿ ಎಂದು ಹೆದ್ದಾರಿ ಪ್ರಾಧಿಕಾರವನ್ನು ಪ್ರಶ್ನಿಸಿತ್ತು. ಇದು ಕೇಸಿನಲ್ಲಿ ಹೆದ್ದಾರಿ ಪ್ರಾಧಿಕಾರಕ್ಕೆ ಹಿನ್ನಡೆಯನ್ನೊದಗಿಸಿತ್ತು. ಇದೀಗ ತೀರ್ಪು ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಟೋಲ್ ಸತ್ಯಾಗ್ರಹ ಪ್ರಬಲಗೊಳಿಸುವುದಾಗಿ ಕ್ರಿಯಾ ಸಮಿತಿ ತಿಳಿಸಿದೆ.


