ಕಾಸರಗೋಡು: ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ನೇತೃತ್ವದ ಐಕ್ಯರಂಗದಲ್ಲಿ ಪ್ರಮುಖ ಮಿತ್ರಪಕ್ಷ ಮುಸ್ಲಿಂಲೀಗ್ ಹಾಗೂ ಕಾಂಗ್ರೆಸ್‍ನೊಳಗಿನ ಮುಸುಕಿನ ಗುದ್ದಾಟ ಹೆಚ್ಚಾಗತೊಡಗಿದ್ದು, ಒಳಜಗಳಬೀದಿಗೆ ಬಂದಿದೆ.
ಜಿಲ್ಲಾ ಪಂಚಾಯಿತಿಯ ಎಣ್ಮಕಜೆ ಡಿವಿಶನ್‍ನಲ್ಲಿ ಐಕ್ಯರಂಗದಿಂದ ಗೆಲುವು ಸಾಧಿಸಿರುವ ಸೋಮಶೇಖರ ಜೆ.ಎಸ್ ಅವರಿಂದ ಮುಸ್ಲಿಂಲೀಗ್ ಪ್ರಾಬಲ್ಯವಿರುವ ಎಣ್ಮಕಜೆ ಪಂಚಾಯಿತಿಯ ನಾಲ್ಕು ವಾರ್ಡುಗಳ ಲೀಗಿನ ನೇತಾರರು ಚುನಾವಣೆಯಲ್ಲಿ ದುಡಿಯಲು ತಲಾ 50ಸಾವಿರ ರೂ. ಪಡೆದುಕೊಂಡಿರುವುದಾಗಿ ಸ್ವತ: ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ನಾಯಕ್ ಬಹಿರಂಗಪಡಿಸಿದ್ದು, ಈ ಬಗ್ಗೆ ಶಬ್ಧ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮುಸ್ಲಿಂಲೀಗ್ ಜಿಲ್ಲಾ ಸಮಿತಿಯ ನಿರ್ದೇಶ ಮೀರಿ ಪಂಚಾಯಿತಿಯ ನಾಲ್ಕು ವಾರ್ಡುಗಳ ಮುಸ್ಲಿಂಲೀಗ್ ನೇತಾರರು ಹಣ ಪಡೆದುಕೊಂಡಿದ್ದು, ಇದಕ್ಕೆ ಅಗತ್ಯವಿರುವ ಪುರಾವೆ ಸಲ್ಲಿಸಲು ಸಿದ್ಧನಿದ್ದೇನೆ. ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಲೂ ತಯಾರಿರುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಮಧ್ಯೆ ಕಳೆದ ಹಲವು ಸಮಯದಿಂದ ಮುಸುಕಿನ ಗುದ್ದಾಟ ನಡೆದುಬರುತ್ತಿದ್ದು, ತಮ್ಮ ಒಕ್ಕೂಟದ ಅಭ್ಯರ್ಥಿ ಗೆಲುವಿಗೆ ಅಬ್ಯರ್ಥಿಯಿಂದಲೇ ಹಣ ಪಡೆದುಕೊಂಡಿರುವ ಮುಸ್ಲಿಂಲೀಗಿನ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಎಣ್ಮಕಜೆಯಲ್ಲಿ ಚುನಾವಣೆಗೆ ಮಿತ್ರಪಕ್ಷದವರಿಂದಲೇ ಹಣ ಪಡೆದುಕೊಳ್ಳುವ ಮೂಲಕ ವಂಚಿಸಲಾಗಿದೆ. ಇದು ಒಕ್ಕೂಟ ವ್ಯವಸ್ಥೆಗೆ ಭಾರೀ ಧಕ್ಕೆ ತಂದೊಡ್ಡಲಿರರುವುದಾಗಿ ಕಾಂಗ್ರೆಸ್ ಮುಖಂಡ ಶಬ್ದ ಸಂದೇಶದಲ್ಲಿ ತಿಳಿಸಿದ್ದಾರೆ.

