ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ ಪುತ್ತಿಗೆ ಡಿವಿಷನ್‍ನಿಂದ ಐಕ್ಯರಂಗ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ ಜೆ.ಎಸ್. ಸೋಮಶೇಖರ ಅವರು ಚುನಾವಣಾ ಪ್ರಚಾರಕ್ಕಾಗಿ ನಿಗದಿಗಿಂತ ಹೆಚ್ಚಿನ ಹಣ ವ್ಯಯಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಗೆಲುವನ್ನು ಅಮಾನ್ಯಗೊಳಿಸಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಎಂ.ಎಲ್. ಅಶ್ವಿನಿ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನೇತೃತ್ವ ನೀಡುವ ಐಕ್ಯರಂಗದ ಮಿತ್ರಪಕ್ಷ ಮುಸ್ಲಿಂ ಲೀಗ್‍ನ ಭದ್ರಕೋಟೆಗಳಾದ ಎಣ್ಮಕಜೆ ಪಂಚಾಯಿತಿಯ ನಾಲ್ಕು ವಾರ್ಡ್‍ಗಳಲ್ಲಿ ಮುಸ್ಲಿಂ ಲೀಗ್ ನಾಯಕರಿಗೆ ತಲಾ 50,000 ರೂಪಾಯಿಗಳನ್ನು ಹಸ್ತಾಂತರಿಸಲಾಗಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋಮಶೇಖರ ಅವರ ಸಹೋದರ, ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ರಾಧಾಕೃಷ್ಣ ನಾಯಕ್ ಅವರ ವಾಟ್ಸಾಪ್ ಆಡಿಯೋ ಸಂದೇಶದ ಪ್ರಕಾರ, ಇದಕ್ಕಾಗಿ 2 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಅಭ್ಯರ್ಥಿಯೊಬ್ಬರು ಗರಿಷ್ಠ 1.50 ಲಕ್ಷ ರೂಪಾಯಿ ವೆಚ್ಚಮಾಡಬಹುದಾಗಿದ್ದು, ಕೇವಲ 4 ವಾರ್ಡ್‍ಗಳ ಚುನಾವಣಾ ವೆಚ್ಚ ಈ ಮಿತಿಯನ್ನು ಮೀರರಿದೆ.
ಬಿಜೆಪಿ ಗೆಲುವು ಸಾಧಿಸುತ್ತಾ ಬರುತ್ತಿರುವ ಪುತ್ತಿಗೆ ಜಿಲ್ಲಾ ಪಂಚಾಯಿತಿ ಡಿವಿಷನನ್ನು ಶತಾಯಗತಾಯ ವಶಪಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ.
ಚುನಾವಣಾ ಪ್ರಚಾರಕ್ಕೆ ವಿಧಿಸಲಾದ ಮಿತಿಗಿಂತ ಹೆಚ್ಚಿನ ಹಣ ವ್ಯಯಿಸುವುದು ಮತ್ತು ಮತದಾರರನ್ನು ಸೆಳೆಯಲು ಹಣದ ಆಮಿಷ ಒಡ್ಡುವುದು ಕೇರಳ ಪಂಚಾಯಿತಿ ರಾಜ್ ಆಕ್ಟ್ 1994, 1995ರ ಕೇರಳ ಪಂಚಾಯಿತಿ ರಾಜ್ (ಚುನಾವಣಾ ನಡಾವಳಿ) ನಿಯಮಗಳು ಮತ್ತು ಸಂವಿಧಾನದ ಆರ್ಟಿಕಲ್ 243 ರ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಸೆಕ್ಷನ್ 53 ರ ಅಡಿಯಲ್ಲಿ ಐಕ್ಯರಂಗ ಅಭ್ಯರ್ಥಿಯ ಗೆಲುವನ್ನು ರದ್ದುಗೊಳಿಸಬೇಕು ಮತ್ತು ಈ ಬಗ್ಗೆ ತನಿಖೆ ನಡೆಸಿ ಐಕ್ಯರಂಗ ಅಭ್ಯರ್ಥಿ ಹಾಗೂ ಮುಸ್ಲಿಂ ಲೀಗ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಂ.ಎಲ್ ಅಶ್ವಿನಿ ಆಗ್ರಹಿಸಿದರು.


